ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ದುರಸ್ತಿ ವೇಳೆ ಕುಸಿತ

KannadaprabhaNewsNetwork |  
Published : Jan 29, 2025, 01:31 AM IST
19 | Kannada Prabha

ಸಾರಾಂಶ

ಕಳೆದ ಮೂರು ದಿನಗಳಿಂದ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಪಾರಂಪರಿಕ ಮಾದರಿಯಲ್ಲಿ ಮರು ನಿರ್ಮಾಣ ಕಾರ್ಯವು ಆರಂಭಗೊಂಡಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಮೂರು ವರ್ಷಗಳ ಹಿಂದೆ ಶಿಥಿಲಗೊಂಡು ಕುಸಿದಿದ್ದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡದ ದುರಸ್ತಿ ಕಾಮಗಾರಿ ವೇಳೆ ಮೇಲ್ಛಾವಣಿ ಪೂರ್ಣ ಕುಸಿದು, ಓರ್ವ ಕಾರ್ಮಿಕ ಅವಶೇಷಗಳಡಿ ಸಿಲುಕಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕಳೆದ ಮೂರು ದಿನಗಳಿಂದ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಪಾರಂಪರಿಕ ಮಾದರಿಯಲ್ಲಿ ಮರು ನಿರ್ಮಾಣ ಕಾರ್ಯವು ಆರಂಭಗೊಂಡಿತ್ತು. 14 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದರು. ಈ ವೇಳೆ ಏಕಾಏಕಿ ತಾರಸಿ ಕುಸಿದಿದ್ದು, ಕಟ್ಟಡದ ಒಳಗಡೆ ಇದ್ದ ಗೌಸಿಯಾನಗರದ ಸದ್ದಾಂ ಎಂಬವರು ಅವಶೇಷಗಳಡಿ ಸಿಲುಕಿದ್ದಾರೆ.

2 ದಿನಗಳಿಂದ ಕಟ್ಟಡ ತೆರವು ಕಾರ್ಯದಲ್ಲಿ ನಿರತರಾಗಿದ್ದೇವು. ಎಲ್ಲಾ ಕೆಲಸ ಮುಗಿಯಿತು. ಟೀ ಕುಡಿದು ಬಂದು ಮನೆಗೆ ಹೋಗುವ ಸಿದ್ಧತೆಯಲ್ಲಿದ್ದವು. ಸದ್ದಾಂ ಬಟ್ಟೆ ಎತ್ತಿಕೊಂಡು ಬರಲು ಕಟ್ಟಡದ ಒಳಗಡೆ ಹೋದ ವೇಳೆ ಮೇಲ್ಛಾವಣಿ ಕುಸಿಯಿತು ಎಂದು ಕಾರ್ಮಿಕರೊಬ್ಬರು ತಿಳಿಸಿದರು.

ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ದಳ ಮತ್ತು ನಗರ ಪಾಲಿಕೆ ಸಿಬ್ಬಂದಿ, ಅವಶೇಷಗಳಡಿ ಸಿಲುಕಿರುವ ವ್ಯಕ್ತಿಯನ್ನು ಹೊರ ತರಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಸ್ಥಳಕ್ಕೆ ಶಾಸಕ ಕೆ. ಹರೀಶ್‌ ಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಕಾಲೇಜಿನ ಪ್ರಾಧ್ಯಾಪಕರು ಭೇಟಿ ನೀಡಿ ಪರಿಶೀಲಿಸಿದರು.

----

ಕೋಟ್...

ಮೂರು ವರ್ಷಗಳ ಹಿಂದೆ ಕಟ್ಟಡ ಕುಸಿದಿತ್ತು. ಜಿಲ್ಲಾ ಪಾರಂಪರಿಕ ಸಮಿತಿ ಅನುಮೋದನೆಯ ಮೇರೆಗೆ ಹೊಸದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಒಬ್ಬ ಕಾರ್ಮಿಕ ಅವಶೇಷಗಳಡಿ ಸಿಲುಕಿದ್ದಾನೆ. ಅಗ್ನಿಶಾಮಕ ದಳ, ಪೊಲೀಸರಿಂದ ಕಾರ್ಯಾಚರಣೆ ನಡೆಯುತ್ತಿದೆ.

- ಕೆ. ಹರೀಶ್‌ ಗೌಡ, ಶಾಸಕರು

----

ಶಿಥಿಲಗೊಂಡ ಕಟ್ಟಡ ತೆರವು ಕಾರ್ಯದ ವೇಳೆ ತಾರಸಿ ಕುಸಿದಿದೆ. 13 ನೌಕರರು ಹೊರಗೆ ಬಂದಿದ್ದಾರೆ. ಒಬ್ಬರು ಸಿಲುಕಿಕೊಂಡಿದ್ದಾರೆ. ಜಿಲ್ಲಾಡಳಿತ, ಪಾಲಿಕೆ, ಅಗ್ನಿಶಾಮಕ ಸಿಬ್ಬಂದಿ ಕಟ್ಟಡ ತ್ಯಾಜ್ಯ ತೆಗೆಯುತ್ತಿದ್ದಾರೆ. ಮುಂಜಾಗ್ರತಾ ಕ್ರಮ ವಹಿಸದಿರುವ ಬಗ್ಗೆ ಮತ್ತು ಲೋಪದೋಷದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

- ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!