3300 ಕಿ.ಮೀ. 11 ತಿಂಗಳಲ್ಲಿ ಕ್ರಮಿಸಿದ ದಿನೇಶ್ ಬೋವಿ!

KannadaprabhaNewsNetwork |  
Published : Sep 28, 2025, 02:00 AM IST
27ದಿನೇಶ್ | Kannada Prabha

ಸಾರಾಂಶ

2024ರ ಅ.15ರಂದು ದಿನೇಶ್ ಈ ಒಂಟಿ ಯಾತ್ರೆಯನ್ನು ಉಡುಪಿಯಿಂದ ಆರಂಭಿಸಿದ್ದರು. ಈ ವರ್ಷದ ಸೆ.15ರಂದು ಲಡಾಖ್ ತಲುಪಿದ್ದರು. ನಡುವೆ ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣಗಳನ್ನು ಹಾದು ಜಮ್ಮು ಕಾಶ್ಮೀರ ತಲುಪಿದ್ದಾರೆ. ಹೋದಲ್ಲೆಲ್ಲ ಪರಿಸರ ಉಳಿಸಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

  ಕುಂದಾಪುರ :  ಇಲ್ಲಿನ ಕಮಲಶಿಲೆ ಗ್ರಾಮದ ಹಳ‍್ಳಿಹೊಳೆಯ ಯುವಕ ಉಡುಪಿಯಿಂದ ಲಡಾಖ್‌ವರೆಗೆ ಸುಮಾರು 3300 ಕಿ.ಮೀ. ದೂರವನ್ನು ಸೈಕಲ್‌ ಮೇಲೆ 11 ತಿಂಗಳಲ್ಲಿ ಕ್ರಮಿಸಿ ಪರಿಸರ ಉಳಿಸಿ ಎಂಬ ಸಂದೇಶವನ್ನು ಸಾರಿ ಬಂದಿದ್ದಾರೆ. 

ಇಲ್ಲಿನ ಪಾರ್ವತಿ ಮತ್ತು ಶೇಷು ಬೋವಿ ಎಂಬವರ ಮಗ ದಿನೇಶ್ ಬೋವಿ ಈ ಅಪ್ರತಿಮ ಸಾಧನೆ ತೋರಿದ ಸಾಹಸಿ. ಶನಿವಾರ ಊರಿಗೆ ಮರಳಿದಾಗ ಅವರು ಕಲಿತ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.2024ರ ಅ.15ರಂದು ದಿನೇಶ್ ಈ ಒಂಟಿ ಯಾತ್ರೆಯನ್ನು ಉಡುಪಿಯಿಂದ ಆರಂಭಿಸಿದ್ದರು. ಈ ವರ್ಷದ ಸೆ.15ರಂದು ಲಡಾಖ್ ತಲುಪಿದ್ದರು. 

ನಡುವೆ ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣಗಳನ್ನು ಹಾದು ಜಮ್ಮು ಕಾಶ್ಮೀರ ತಲುಪಿದ್ದಾರೆ. ಹೋದಲ್ಲೆಲ್ಲ ಪರಿಸರ ಉಳಿಸಿ ಎಂದು ಜನರಿಗೆ ಮನವಿ ಮಾಡಿದ್ದಾರೆ.11 ತಿಂಗಳ ಸೈಕಲ್ ಈ ಪ್ರಯಾಣಕ್ಕೆ ಸುಮಾರು 1.5 ಲಕ್ಷ ರು. ನಷ್ಟು ಅವರು ವೆಚ್ಚ ಮಾಡಿದ್ದಾರೆ. ಕಾಲೇಜಿನ ಹಳೆವಿದ್ಯಾರ್ಥಿಗಳು ಮತ್ತು ದಾನಿಗಳು ಈ ವೆಚ್ಚವನ್ನು ಭರಿಸಿದ್ದಾರೆ. ಸ್ವತಃ ಸೈಕಲಿಸ್ಟ್ ಆಗಿರುವ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ಸೈಕಲನ್ನು ಕೊಡುಗೆಯಾಗಿ ನೀಡಿದ್ದಾರೆ. 

ಕೇವಲ 6 ತಿಂಗಳಲ್ಲಿ ಈ ಪರಿಸರ ಜಾಗೃತಿ ಪ್ರಯಾಣ ಸಾಧ್ಯವಾದರೂ, ಕಾಶ್ಮೀರದ ಥಾಂಗ್ ಗ್ರಾಮದ ರಸ್ತೆ ವರ್ಷದಲ್ಲಿ 6 ತಿಂಗಳು ಮಾತ್ರ ತೆರೆದಿರುತ್ತದೆ. ಅದ್ದರಿಂದ 1 ತಿಂಗಳು ಮುಂಬೈ ಮತ್ತು 3 ತಿಂಗಳು ಗುಜರಾತಿನಲ್ಲಿ ತಂಗಬೇಕಾಯಿತು. ನಂತರ ನಾನು ಲಡಾಖ್‌ನಲ್ಲಿ ಭಾರತ - ಪಾಕ್‌ ಗಡಿಯಲ್ಲಿರುವ ಛಾಂಗ್ ಗ್ರಾಮದ ವರೆಗೂ ಹೋಗುವುದಕ್ಕೆ ಅವಕಾಶ ಸಿಕ್ಕಿತು. ಅದರಾಚೆ ಪಾಕಿಸ್ತಾನವಿದೆ ಎಂದು ದಿನೇಶ್ ತಮ್ಮ ಅನುಭವನ್ನು ಹಂಚಿಕೊಂಡರು.ಅವರನ್ನು ಮಲ್ಪೆ ಠಾಣೆಯ ಎಸ್‌ಐ ಅನಿಲ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ. ಆಳ್ವ, ನಿವೃತ್ತ ಪ್ರಾಧ್ಯಾಪಕ ಡಾ.ಜಯರಾಮ ಶೆಟ್ಟಿಗಾರ್, ಹಳೆವಿದ್ಯಾರ್ಥಿ ಸಂಘದ ಆಲನ್ ಲೂವಿಸ್, ಶಾಲೆಟ್ ಮಥಾಯಸ್, ಶಿಕ್ಷಕ ರಕ್ಷಕ ಸಂಘದ ಗಣೇಶ್ ಮೇಸ್ತ ಮುಂತಾದವರು ಬರ ಮಾಡಿಕೊಂಡರು.- 

326 ದಿನ ಸೈಕಲ್‌ ಸವಾರಿ ಮಾಡಿದ ನಾಯಿ!

ದಿನೇಶ್, ಕರ್ನಾಟಕ-ಗೋವಾ ಗಡಿಭಾಗದಲ್ಲಿ ತಂಗಿದ್ದಾಗ ಬೀದಿ ಬದಿಯಲ್ಲಿದ್ದ ಹೆಣ್ಣು ನಾಯಿಮರಿಯೊಂದಕ್ಕೆ ಆಹಾರ ನೀಡಿದ್ದರು. ಅದು ಅವರ ಬೆನ್ನು ಹತ್ತಿತು. ಅದನ್ನು ಬಿಡಲಾಗದೇ ದಿನೇಶ್, ಸೈಕಲಿನ ಹಿಂಭಾಗದಲ್ಲಿ ಬೋನಿನಲ್ಲಿ ಅದನ್ನಿಟ್ಟುಕೊಂಡು ಲಡಾಖಿಗೆ ಕರೆದುಕೊಂಡು ಹೋಗಿ ಮರಳಿ ಉಡುಪಿಗೆ ತಂದಿದ್ದಾರೆ. ಅದಕ್ಕೆ ಚಾರ್ಲಿ ಎಂದು ಹೆಸರಿಟ್ಟಿದ್ದಾರೆ. ದಿನೇಶ್ ಜೊತೆ ನಾಯಿ ಕೂಡ 326 ದಿನ ಸೈಕಲ್‌ನಲ್ಲಿ ಪ್ರಯಾಣಿಸಿದೆ 

ಸಾಹಸ ಮತ್ತು ಅರ್ಥಪೂರ್ಣ !

ಈ ಹಿಂದೆ ಉಡುಪಿ - ಧರ್ಮಸ್ಥಳ ಕಾಲ್ನಡಿಗೆ ಮಾಡಿದ್ದೆ. ಬಳಿಕ ಸೈಕಲಿನಲ್ಲಿ ಉಡುಪಿ - ಕನ್ಯಾಕುಮಾರಿಗೆ 1500 ಕಿ.ಮೀ. ದೂರವನ್ನು 21 ದಿನಗಳಲ್ಲಿ ಕ್ರಮಿಸಿದ್ದೆ. ಈ ಬಾರಿ ಸಾಹಸದ ಜೊತೆಗೆ ಪರಿಸರ ಜಾಗೃತಿಯ ಉದ್ದೇಶವನ್ನಿಟ್ಟುಕೊಂಡು ಹೊರಟಿದ್ದೆ. ಉಡುಪಿಯಿಂದ ಲಡಾಖ್‌ವರೆಗೆ ಎಲ್ಲೆಲ್ಲಿ ತಂಗಿದ್ದೇನೋ ಅಲ್ಲಿ ಜನರನ್ನು ಭೇಟಿಯಾಗಿ ಪರಿಸರದ ಮಹತ್ವ, ಅದನ್ನು ಉಳಿಸುವ ಅಗತ್ಯದ ಬಗ್ಗೆ ಹೇಳಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ, ಇದರಿಂದ ನನ್ನ ಈ ಸಾಹಸದ ಅರ್ಥಪೂರ್ಣವಾಗಿ ಯಶಸ್ವಿಯಾಗಿದೆ ಎಂದು ದಿನೇಶ್ ಬೋವಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ