ಮಂಗಳೂರು: ಯಾವುದೇ ಶಕ್ತಿಯಾಗಲಿ, ವ್ಯಕ್ತಿಯಾಗಲಿ ಯುವಕರ ದಾರಿ ತಪ್ಪಿಸಿ, ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹ ನೀಡುವುದನ್ನು ಸರ್ಕಾರ ಸಹಿಸಲ್ಲ. ಇಂಥ ಚಟುವಟಿಕೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯದು ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಮತೀಯ ಸಂಘರ್ಷಗಳು, ಕಾನೂನು ಬಾಹಿರ ಚಟುವಟಿಕೆ, ದ್ವೇಷ ಭಾಷಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶ ಹರಡುವ ಬಗ್ಗೆ ನಿಗಾ ವಹಿಸಿ, ಕ್ಷಿಪ್ರ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ತರಬೇತಿ ಪಡೆದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಿಶೇಷ ಕಾರ್ಯಪಡೆ ಸ್ಥಾಪಿಸಲಾಗಿದ್ದು, ಇದು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಗಣನೀಯ ಕೊಡುಗೆ ನೀಡಿದೆ. ವಿಚ್ಛಿದ್ರಕಾರಿ ಮತ್ತು ಸಮಾಜ ಒಡೆಯುವ ಶಕ್ತಿಗಳು ಅಭಿವೃದ್ಧಿಗೆ ತೊಡಕಾಗಿವೆ. ಸರ್ಕಾರದ ಪ್ರಯತ್ನದಿಂದಾಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸುಧಾರಣೆಯಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಭೂಮಿಕೆ ಸಿದ್ಧವಾಗಿದೆ ಎಂದರು.ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮಗಳ ನೈಜ ಆಶಯಗಳನ್ನು ಪಾಲಿಸುತ್ತಾ, ಬೇರೆ ಧರ್ಮಗಳನ್ನು ಪರಸ್ಪರ ಗೌರವಿಸಿದರೆ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಸಿದರೆ ಜಿಲ್ಲೆಯು ಅಭಿವೃದ್ಧಿಯಾಗಿ ಇಲ್ಲಿನ ಜನರ ಜೀವನ ಮಟ್ಟ ಸುಧಾರಣೆಯಾಗಲಿದೆ ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.ಕಮಿಷನರೆಟ್‌ನಲ್ಲೂ ಅಕ್ಕಪಡೆ: ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಪೊಲೀಸ್ ಇಲಾಖೆ ಸಹಿತ ವಿವಿಧ ಇಲಾಖೆಗಳು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ಅಕ್ಕಪಡೆಯನ್ನು ವಾಹನ ಸಾಹಿತ ಆಧುನಿಕ ಸೌಲಭ್ಯಗಳೊಂದಿಗೆ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಜನವರಿ 1ರಿಂದ ಆರಂಭಿಸಲಾಗಿದೆ. ಇದೀಗ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲೂ ಅಕ್ಕಪಡೆ ಆರಂಭಿಸಲಾಗುತ್ತಿದ್ದು, ಗೃಹ ಇಲಾಖೆ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ದೆಹಲಿ ಮೂಲದ ಪ್ರೊಬೆಶನರಿ ಐಪಿಎಸ್ ಅಧಿಕಾರಿ ಅನನ್ಯಾ ಶ್ರೀವಾಸ್ತವ ಪರೇಡ್ ದಂಡ ನಾಯಕಿಯಾಗಿದ್ದು, ಕನ್ನಡದಲ್ಲಿ ಪರೇಡ್ ನಿರ್ವಹಿಸಿದರು.ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಅತ್ಯಧಿಕ ಅಂಕ ಪಡೆದ 10 ವಿದ್ಯಾರ್ಥಿಗಳಿಗೆ ಈ ಬಾರಿ ಕಂಪ್ಯೂಟರ್ ಬದಲಾಗಿ ತಲಾ 50 ಸಾವಿರ ರು. ನಗದು ಬಹುಮಾನ ನೀಡಿ ಗೌರವಿಸಲಾಯಿತು.ಚಾಲಕರಿಗೆ ಬೆಳ್ಳಿಪದಕ:15 ವರ್ಷಗಳ ಕಾಲ ಕೆಎಸ್‌ಆರ್‌ಟಿಸಿಯಲ್ಲಿ ಅಪಘಾತ ರಹಿತವಾಗಿ ದುಡಿದ ಕರಾಸಸಾನಿ ಪುತ್ತೂರು ವಿಭಾಗದ ಚಾಲಕರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. ಸಾವಿನ ಬಳಿಕ ಅಂಗಾಂಗ ದಾನ ಮಾಡಿದ ಸಿಂಧುಶ್ರೀ ಅವರ ಕುಟುಂಬವನ್ನು ಇದೇ ಸಂದರ್ಭ ಅಭಿನಂದಿಸಲಾಯಿತು.ಸಮಾರಂಭದ ಅಂಗವಾಗಿ ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಎಸೋಸಿಯೇಶನ್ ವತಿಯಿಂದ ವಿಂಟೇಜ್ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಚಿವ ದಿನೇಶ್ ಗುಂಡೂರಾವ್ ಸಹಿತ ಗಣ್ಯರು ಇದನ್ನು ವೀಕ್ಷಣೆ ಮಾಡಿದರು.ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್, ಐಜಿಪಿ ಅಮಿತ್ ಸಿಂಗ್, ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಜಿಲ್ಲಾ ಎಸ್ಪಿ ಅರುಣ್ ಕುಮಾರ್, ಅಪರ ಜಿಲ್ಲಾಧಿಕಾರಿ ರಾಜು, ವಿವಿಧ ನಿಗಮ, ಅಕಾಡೆಮಿ ಅಧ್ಯಕ್ಷರು, ಮುಖಂಡರು ಇದ್ದರು.
ಮನ್‌ರೇಗ ರದ್ದತಿ ಸಂವಿಧಾನ ಬಾಹಿರಅಸಂಖ್ಯಾತ ಭಾರತೀಯರಿಗೆ ಉದ್ಯೋಗವನ್ನು ಹಕ್ಕಿನ ರೂಪದಲ್ಲಿ ಖಾತರಿಪಡಿಸಲು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ರಾಜ್ಯಗಳ ವೆಚ್ಚದಲ್ಲಿ ವ್ಯಾಪಕ ಅಧಿಕಾರಗಳನ್ನು ಕೇಂದ್ರಕ್ಕೆ ಹಸ್ತಾಂತರಿಸುವ ಹೊಸ ಯೋಜನೆಯು ಬಡವರ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಸಂವಿಧಾನಬಾಹಿರ ಆಗಿದೆ. ವ್ಯಾಖ್ಯಾನವೇ ಇಲ್ಲದ ವಿಕಸಿತ ಭಾರತ್ ಎಂಬ ಕಲ್ಪನೆಯ ಅಡಿಯಲ್ಲಿ ದೇಶದ ನಾಗರಿಕರ ಆಯ್ಕೆಯನ್ನು ಮೊಟಕುಗೊಳಿಸಿ ಉದ್ಯೋಗ ಅಧಿಕಾರವನ್ನು ಕೇಂದ್ರ ಸರ್ಕಾರದ ಹಿಡಿತಕ್ಕೆ ಒಳಪಡಿಸುವ ಯೋಜನೆ ನಾಗರಿಕರ ಹಿತದೃಷ್ಟಿಗೆ ವಿರುದ್ಧವಾಗಿದೆ. ಹೊಸ ಯೋಜನೆಯನ್ನು ರಾಜ್ಯ ಸರ್ಕಾರವು ಕಾನೂನು ಬದ್ಧವಾಗಿ ಮತ್ತು ನೈತಿಕವಾಗಿ ವಿರೋಧಿಸುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.