₹10 ಕೋಟಿ ಆಸ್ತಿ ಒಡೆಯ ದಿಂಗಾಲೇಶ್ವರ ಸ್ವಾಮೀಜಿ

KannadaprabhaNewsNetwork | Published : Apr 19, 2024 1:05 AM

ಸಾರಾಂಶ

ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಗುರುವಾರ ಲೋಕಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದು, ಸ್ವಾಮೀಜಿ ಸಲ್ಲಿಸಿದ ನಾಮಪತ್ರದ ಅಫಿಡವಿಟ್‌ನಲ್ಲಿ ತಮ್ಮ ಹಾಗೂ ದಿಂಗಾಲೇಶ್ವರ ಮಠದ ಜಂಟಿಯಾಗಿರುವ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಗುರುವಾರ ಲೋಕಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದು, ಸ್ವಾಮೀಜಿ ಸಲ್ಲಿಸಿದ ನಾಮಪತ್ರದ ಅಫಿಡವಿಟ್‌ನಲ್ಲಿ ತಮ್ಮ ಹಾಗೂ ದಿಂಗಾಲೇಶ್ವರ ಮಠದ ಜಂಟಿಯಾಗಿರುವ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

₹1.22 ಕೋಟಿ ಚರಾಸ್ತಿ ಹಾಗೂ ₹8.52 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ₹9.74 ಕೋಟಿ ಆಸ್ತಿ ಇರುವುದಾಗಿ ಸ್ವಾಮೀಜಿ ಘೋಷಿಸಿಕೊಂಡಿದ್ದಾರೆ. ಜತೆಗೆ ₹39.68 ಲಕ್ಷ ಹೊಣೆಗಾರಿಕೆಯನ್ನು ಅಫಿಡವಿಟ್‌ನಲ್ಲಿ ತೋರಿಸಿದ್ದಾರೆ. ಸ್ವಾಮೀಜಿ ಕೈಯಲ್ಲಿ ₹1.25 ಲಕ್ಷ ನಗದು ಇದ್ದು, ಬಾಳೇಹೊಸೂರಿನ ವಿವಿಧ ಬ್ಯಾಂಕ್‌ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಸುಮಾರು ₹38 ಲಕ್ಷ ಉಳಿತಾಯ ಹಾಗೂ ಠೇವಣಿ ಇಟ್ಟಿದ್ದಾರೆ. ಬಾಳೆಹೊಸೂರಿನ ಸಹಕಾರಿ ಸಂಘಗಳಲ್ಲಿ ಶೇರ್‌ ಹೊಂದಿದ್ದಾರೆ. ₹39.50 ಲಕ್ಷ ಮೌಲ್ಯದ ಟೋಯೊಟೋ ಇನ್ನೋವಾ ಹೈಬ್ರಿಡ್‌ ಕಾರು, ಮಹಿಂದ್ರಾ ಟ್ರ್ಯಾಕ್ಟರ್‌, ₹18.30 ಲಕ್ಷ ಮೌಲ್ಯದ ಟೋಯೋಟಾ ಇನ್ನೋವಾ ಕಾರು ಹಾಗೂ ಬಾಲೇಹೊಸೂರಿನಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಸ್ವಾಮೀಜಿ ಹೊಂದಿದ್ದಾರೆ. 820 ಗ್ರಾಂ ಬೆಳ್ಳಿ, 18.9 ಗ್ರಾಂ ಚಿನ್ನ ಸೇರಿದಂತೆ ₹1.22 ಕೋಟಿ ಚರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಅದೇ ರೀತಿ ಬಾಲೇಹೊಸೂರಿನಲ್ಲಿ ಪೂರ್ವಿಕ ಮಠದಿಂದ ಬಂದ 23 ಎಕರೆ ಕೃಷಿ ಭೂಮಿ ಇದೆ. ವಿವಿಧೆಡೆ ಸುಮಾರು ಎಂಟು ಸಾವಿರ ಚದರಿ ಅಡಿ ಕೃಷಿಯೇತರ ಭೂಮಿ ಇದ್ದು ಅದರ ಮೌಲ್ಯ ₹1.25 ಕೋಟಿ, ₹2 ಕೋಟಿ ಮೌಲ್ಯದ ಶಾಲೆ ಸೇರಿದಂತೆ ಒಟ್ಟಾರೆ ಮಠ ಹಾಗೂ ತಮ್ಮ ಹೆಸರಿನ ಜಂಟಿಯಾಗಿ ₹8.52 ಕೋಟಿ ಸ್ಥಿರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.48 ವರ್ಷದ ಸ್ವಾಮೀಜಿ ಮೊದಲಿನ ಹೆಸರು ವೀರಯ್ಯ. ಸನ್ಯಾಸತ್ವ ಸ್ವೀಕರಿಸಿದ ನಂತರ ಬಾಲೇಹೊಸೂರ-ಶಿರಹಟ್ಟಿಯ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಯಾಗಿದ್ದು, ತಮ್ಮ ಹಾಗೂ ಶ್ರೀಮಠದ ಹೆಸರಿನಲ್ಲಿ ಜಂಟಿಯಾಗಿರುವ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

Share this article