ಕಚೇರಿಯ ಕೆಲಸಕ್ಕೆ ನೇರವಾಗಿ ಸಂಪರ್ಕಿಸಿ: ಆರ್‌ಟಿಒ ರಾಕೇಶ್‌ಕುಮಾರ್‌

KannadaprabhaNewsNetwork | Published : Oct 13, 2023 12:15 AM

ಸಾರಾಂಶ

ಕಚೇರಿಯ ಕೆಲಸಕ್ಕೆ ನೇರವಾಗಿ ಸಂಪರ್ಕಿಸಿ: ಆರ್‌ಟಿಒ ರಾಕೇಶ್‌ಕುಮಾರ್‌
ಹಳೇ ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವ ಯಾವುದೇ ಆದೇಶ ಸರ್ಕಾರ ಮಾಡಿಲ್ಲ । ನೂತನ ಆರ್ ಟಿ ಒ ಅಧಿಕಾರ ಸ್ವೀಕಾರ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಇಲಾಖೆಗೆ ಸಂಬಂಧ ಪಟ್ಟ ಯಾವುದೇ ಕೆಲಸಗಳಿದ್ದರೆ ನೇರವಾಗಿ ತಮ್ಮನ್ನು ಭೇಟಿ ಮಾಡಿದರೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚಿಸಿ ತ್ವರಿತವಾಗಿ ಮಾಡಿಕೊಳ್ಳಲು ಬದ್ಧ ವಾಗಿದ್ದೇವೆ ಎಂದು ನೂತನ ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ಭರವಸೆ ನೀಡಿದರು. ಗುರುವಾರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಸ್ನೇಹಿ ಆಡಳಿತಕ್ಕೆ ಬದ್ಧವಾಗಿದ್ದು ಇಲಾಖೆ ಸಿಬ್ಬಂದಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದ್ದೇನೆಂದು ಹೇಳಿದರು. ಸಾರಿಗೆ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಮೊದಲು ಮಧ್ಯವರ್ತಿಗಳನ್ನು ಭೇಟಿ ಮಾಡದೆ ನೇರವಾಗಿ ಸಿಬ್ಬಂದಿಯನ್ನು ಭೇಟಿ ಮಾಡಬೇಕು, ಅವರು ಸ್ಪಂಧಿಸದಿದ್ದರೆ ತಮ್ಮನ್ನು ಭೇಟಿ ಮಾಡಿದರೆ ತಕ್ಷಣ ವಾಹನ ಮಾಲಿಕರ ಸಮಸ್ಯೆಗೆ ಸ್ಪಂಧಿಸುತ್ತೇನೆ. ಆರ್ ಟಿ ಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿತ್ತು. ಈಗ ನಿಯಂತ್ರಣ ಮಾಡಿದ್ದೇವೆ. ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡದೆ ಕೆಲಸ ಮಾಡಬೇಕೆಂದು ಎಚ್ಚರಿಸಿದರು. ದಿನದ 24 ಗಂಟೆ ತಮ್ಮ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ಸಂಪರ್ಕಿಸಿ ದರೆ ತಮ್ಮ ಕೆಲಸಗಳನ್ನು ಸರ್ಕಾರಿ ಆದೇಶದನ್ವಯ ಮಾಡಿಕೊಡಲು ಬದ್ಧವಾಗಿದ್ದು ಇದಕ್ಕೆ ಸಾರ್ವಜನಿಕರ ಸಹಕರಿಸಬೇಕೆಂದು ಮನವಿ ಮಾಡಿದರು. ವಾಹನಗಳ ನಂಬರ್ ಪ್ಲೇಟ್ ಬದಲಾವಣೆಗೆ ಈಗಾಗಲೇ ಆದೇಶವಾಗಿದ್ದು ವಾಹನ ಮಾಲಿಕರು ನಿಗಧಿತ ಅವಧಿಯೊಳಗೆ ನಂಬರ್ ಪ್ಲೇಟ್‌ ಬದಲಾಯಿಸಿ ಇಲಾಖೆಯೊಂದಿಗೆ ಸಹಕರಿಸಬೇಕು, ನಂಬರ್ ಪ್ಲೇಟ್ ಬದಲಾವಣೆ ಕಳ್ಳತನ, ರಸ್ತೆ ಅಪಘಾತಗಳು, ಕೊಲೆ ಪ್ರಕರಣಗಳ ಮಾಹಿತಿಗೆ ಪೂರಕವಾಗಿ ಲಭ್ಯವಾಗಲು ಸಹಕಾರಿಯಾಗುತ್ತದೆ ಎಂದರು. ಚಿಕ್ಕಮಗಳೂರು ಪ್ರವಾಸಿ ತಾಣಗಳ ಜಿಲ್ಲೆಯಾಗಿದ್ದು ದತ್ತಪೀಠ ಮಾರ್ಗದಲ್ಲಿ ಹಳೇ ಜೀಪುಗಳಲ್ಲಿ ಪ್ರವಾಸಿಗರನ್ನು ತುಂಬಿಕೊಂಡು ಸಂಚರಿಸುತ್ತಿವೆ. ಈ ಕುರಿತು ಪ್ರಶ್ನಿಸಿದಾಗ ಹಳೇ ಖಾಸಗಿ ವಾಹನ ಗಳನ್ನು ಗುಜರಿಗೆ ಹಾಕುವ ಯಾವುದೇ ಆದೇಶವನ್ನು ಸರ್ಕಾರ ಮಾಡಿಲ್ಲ, ಶಾಲಾ ವಾಹನ, ಸಾರಿಗೆ ಬಸ್‌ಗಳು ಮತ್ತು ಸರ್ಕಾರಿ ಇಲಾಖೆ ವಾಹನಗಳಿಗೆ ಅನ್ವಯವಾಗುವಂತೆ ಸರ್ಕಾರ ಆದೇಶ ನೀಡಿದೆ ಎಂದು ಹೇಳಿದರು. ಹಳೇ ವಾಹನಗಳಿಗೆ ಮಾತ್ರ ನಂಬರ್ ಪ್ಲೇಟ್ ಬದಲಿಸಲು ಸೂಚನೆ ನೀಡಿದ್ದು ಹೊಸ ವಾಹನಗಳಲ್ಲಿ ಈಗಾಗಲೇ ನೂತನ ವ್ಯವಸ್ಥೆಯಲ್ಲಿಯೇ ನಂಬರ್ ಪ್ಲೇಟ್‌ಗಳು ಬದಲಾಗಿ ಬರುತ್ತಿದೆ ಎಂದು ಸ್ಪಷ್ಟ ಪಡಿಸಿದರು. ಇದೇ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ನೂರುಲ್ಲಾ ಖಾನ್ ಮಾತನಾಡಿ, ಕಳೆದ ಸೆ. 4 ರಂದು ಕರವೇ (ಶಿವರಾಮೇ ಗೌಡ) ಬಣದಿಂದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಲಂಚದ ಹಾವಳಿ ತಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪರಿಣಾಮ ಆರ್ ಟಿ ಒ ಅಧಿಕಾರಿ ಮಧುರಾ ಅವರು ಸಕಲೇಶಪುರಕ್ಕೆ ವರ್ಗಾವಣೆಯಾಗಿದ್ದಾರೆ ಎಂದರು. ಸಾಗರದಿಂದ ವರ್ಗಾವಣೆಯಾಗಿ ಬಂದಿರುವ ನೂತನ ಆರ್ ಟಿ ಒ ಅಧಿಕಾರಿ ರಾಕೇಶ್ ಕುಮಾರ್‌ ಅಧಿಕಾರ ಸ್ವೀಕರಿಸಿದ್ದು, ಭ್ರಷ್ಠಾಚಾರ ನಿರ್ಮೂಲನೆಯ ಭಾಗವಾಗಿ ಕರವೇ ಹೋರಾಟಕ್ಕೆ ಸರ್ಕಾರ ಬೆಂಬಲಿಸಿ ನೂತನ ಅಧಿಕಾರಿಯನ್ನು ನೇಮಕ ಮಾಡಿರುವುದನ್ನು ಸ್ವಾಗತಿಸಿದರು. ಕರವೇ ಪದಾಧಿಕಾರಿಗಳು ನೂತನ ಆರ್ ಟಿ ಒ ರಾಕೇಶ್ ಕುಮಾರ್‌ ಅವರಿಗೆ ಸ್ವಾಗತಕೋರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದಿರುವ ಭ್ರಷ್ಠಾಚಾರಗಳು ಮುಂದೆ ಮರುಕಳಿಸದಂತೆ ಕೆಲಸ ಮಾಡಬೇಕೆಂದು ಒತ್ತಾಯಿಸಿದರು. 12 ಕೆಸಿಕೆಎಂ 4 ಚಿಕ್ಕಮಗಳೂರಿನ ನೂತನ ಆರ್ ಟಿ ಒ ರಾಕೇಶ್‌ಕುಮಾರ್‌ ಅವರಿಗೆ ಕರವೇ ಜಿಲ್ಲಾಧ್ಯಕ್ಷ ನೂರುಲ್ಲಾ ಖಾನ್‌ ಹಾಗೂ ಸಂಘಟನೆ ಪದಾಧಿಕಾರಿಗಳು ಸ್ವಾಗತಕೋರಿದರು.

Share this article