ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಪಾಲಿಕೆ ಮುಂಭಾಗದಲ್ಲಿ ಸಂಘದ ಅಧ್ಯಕ್ಷ ಎಂ.ಆರ್.ದುಗ್ಗೇಶ ಇತರರ ನೇತೃತ್ವದಲ್ಲಿ ಎರಡು ದಿನಗಳ ಹೋರಾಟ ಆರಂಭಿಸಿದ ಹೊರ ಗುತ್ತಿಗೆ ನೌಕರರು, ಮಾ.15ರಂದು ಹೊರಗುತ್ತಿಗೆ ನೌಕರರ ನಡಿಗೆ ಮುಖ್ಯಮಂತ್ರಿಯವರ ಮನೆ ಕಡೆಗೆ ಆಂದೋಲನದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಲಿದ್ದಾರೆ.
ಧರಣಿ ವೇಳೆ ಮಾತನಾಡಿದ ಸಂಘದ ಎಂ.ಆರ್.ದುಗ್ಗೇಶ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರ ಚಾಲಕರು, ನೀರಗಂಟಿಗಳು, ಲೋಡರ್ಸ್, ಕ್ಲೀನರ್ಸ್, ಹೆಲ್ಪರ್ಸ್, ಯುಜಿಡಿ ಕಾರ್ಮಿಕರು ಸೇರಿ ಎಲ್ಲ ನೌಕರರ ನೇರ ಪಾವತಿಗೊಳಪಡಿಸಬೇಕು. ಈ ವರೆಗೂ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದ ಸ್ಪಂದನೆ ಸಿಕ್ಕಿಲ್ಲ. ಹೊರ ಗುತ್ತಿಗೆ ನೌಕರರನ್ನು ನೇರ ಪಾವತಿಯಡಿ ತಂದರೆ ಸರ್ಕಾರಕ್ಕೆ ಜಿಎಸ್ಟಿ ಉಳಿತಾಯದ ಜೊತೆಗೆ ನೌಕರರಿಗೆ ಸೇವಾ ಭದ್ರತೆ ಸಿಗಲಿದೆ. ಅಲ್ಲದೇ, ಏಜೆನ್ಸಿಗಳ ಕಿರುಕುಳವೂ ತಪ್ಪಲಿದೆ ಎಂದರು.ಹಿಂದಿನ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿಯೇ ಕಾರ್ಮಿಕರ ನೇರ ಪಾವತಿಗೆ ತರಲು ತೀರ್ಮಾನವಾಗಿದೆ. ಆದರೆ, ನಗರಾಭಿವೃದ್ಧಿ ಇಲಾಖೆಯು ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ. ಪೌರಾಡಳಿತ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು, ಅಗತ್ಯಕ್ಕನುಗುಣವಾಗಿ ಪೌರ ಚಾಲಕರ ಹುದ್ದೆಗಳ ಸೃಜಿಸಬೇಕು ಎಂದು ಒತ್ತಾಯಿಸಿದರು.
...........
ವಿಧಾನಸಭೆ, ಪರಿಷತ್ ನಲ್ಲೂ ನೌಕರರ ಪರ ಬಿಜೆಪಿ ಧ್ವನಿ ಎತ್ತುವ ಭರವಸೆ
ಈ ವೇಳೆ ಮಾತನಾಡಿದ ಪ್ರಸನ್ನಕುಮಾರ, ಹೊರ ಗುತ್ತಿಗೆಯ ಎಲ್ಲಾ ಪಾಲಿಕೆ ನೌಕರರನ್ನು ನೇರ ಪಾವತಿಗೆ ತರಲು ಸರ್ಕಾರಕ್ಕೆ ಬೇಡಿಕೆಯನ್ನು ಪಾಲಿಕೆ ಆಯುಕ್ತರು ಕಳಿಸಿಕೊಡಬೇಕು. ಈಗಾಗಲೇ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಹೊರ ಗುತ್ತಿಗೆ ರದ್ದುಪಡಿಸಿ, ನೇರ ಪಾವತಿ, ನೇಮಕಾತಿ ಮಾಡಬೇಕೆಂಬ ವಿಷಯ ತರಲು ಮನವಿ ಮಾಡಿದ್ದೇವೆ. ಸಭೆಯಲ್ಲಿ ತೀರ್ಮಾನಿಸಿ, ಅದನ್ನು ಸರ್ಕಾರಕ್ಕೆ ಕಳಿಸುವಂತೆ ಒತ್ತಾಯಿಸಿದ್ದೇವೆ. ಬಿಜೆಪಿ ಸದಸ್ಯರೆಲ್ಲ ನಿಮ್ಮ ಪರವಾಗಿದ್ದೇವೆ ಎಂದರು.