ಕಾರಟಗಿ: ಕನಕಗಿರಿ ಕ್ಷೇತ್ರದಲ್ಲಿ ಮುಂದಿನ ಮೂರೂವರೆ ವರ್ಷಗಳ ಅವಧಿಯಲ್ಲಿ ₹೧೦೦ಕೋಟಿ ಅನುದಾನ ಬಳಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಲು ಬದ್ಧನಾಗಿರುವೆ, ಈಗ ಮೊದಲ ಹಂತವಾಗಿ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಬೆನ್ನೂರು, ಉಳೇನೂರು, ಈಳಿಗನೂರು ಮತ್ತು ಕಿಂದಿಕ್ಯಾಂಪ್‌ನ ಸಿಸಿ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ಪ್ರಸಕ್ತ ಕ್ಷೇತ್ರದ ಯಾವುದೇ ರಸ್ತೆ ಕೆಟ್ಟ ಸ್ಥಿತಿಯಲ್ಲಿಲ್ಲ. ಮುಂದೆ ಆದ್ಯತೆಯ ಮೇಲೆ ಕ್ಷೇತ್ರದ ಎಲ್ಲ ರಸ್ತೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನಿಸಿ ಕನಕಗಿರಿಯಲ್ಲಿ ಪ್ರಜಾಸೌಧಕ್ಕೆ ಮತ್ತು ಕಾರಟಗಿಯಲ್ಲಿ ೧೦೦ ಹಾಸಿಗೆ ಆಸ್ಪತ್ರೆಯ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ನಡೆಸಲಾಗುವುದು.
₹೧೬೫ ಕೋಟಿ ವೆಚ್ಚದಲ್ಲಿ ಕಾರಟಗಿ ಮತ್ತು ಕನಕಗಿರಿ ಪಟ್ಟಣಗಳೆರಡಕ್ಕೆ ನೇರವಾಗಿ ತುಂಗಭದ್ರ ನದಿಯಿಂದ ಕುಡಿವ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಕಾಮಗಾರಿಗಳು:
ಒಟ್ಟು ₹೯ಕೋಟಿ ₹ ೧೮ಲಕ್ಷಗಳ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಅದರಲ್ಲಿ ಪ್ರಮುಖವಾಗಿ ಉಳೇನೂರು ಗ್ರಾಮದಲ್ಲಿನ ಸುಳೇಕಲ್ -ನಂದಿಹಳ್ಳಿ ರಸ್ತೆಯ ೬ ಕಿಮೀ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಯಿತು. ಅದೇ ರೀತಿ ₹ ೬೪ ಲಕ್ಷಗಳ ವೆಚ್ಚದಲ್ಲಿ ಆರೋಗ್ಯ ಮತ್ತು ಸುಧಾರಣ ಕೇಂದ್ರ ಕಟ್ಟಡ ನಿರ್ಮಾಣ, ಪರಿಶಿಷ್ಟ ಪಂಗಡ ಕಾಲನಿಯಲ್ಲಿ ₹೪೦ಲಕ್ಷಗಳ ಸಿಸಿ ರಸ್ತೆ ನಿರ್ಮಾಣ, ₹ ೩೦ಲಕ್ಷಗಳ ವೆಚ್ಚದಲ್ಲಿ ಮಾರುತೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.ಇನ್ನು ಬೆನ್ನೂರು ಗ್ರಾಮದಲ್ಲಿ ಪರಿಶಿಷ್ಠ ಜಾತಿ ಕಾಲನಿಯಲ್ಲಿ ₹೪೦ ಲಕ್ಷಗಳ ಸಿಸಿ ರಸ್ತೆ ನಿರ್ಮಾಣ ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ನೆರವೇರಿಸಲಾಯಿತು. ಕೊನೆಯದಾಗಿ ಮರ‍್ಲಾನಹಳ್ಳಿ ಗ್ರಾಮದಲ್ಲಿ ₹ ೬೪ಲಕ್ಷ ವೆಚ್ಚದಲ್ಲಿ ಆರೋಗ್ಯ ಮತ್ತು ಸುಧಾರಣೆ ಕೇಂದ್ರ ಕಟ್ಟಡ ನಿರ್ಮಾಣ, ಪರಿಶಿಷ್ಟ ಜಾತಿ ಕಾಲನಿಯಲ್ಲಿ ೪೦ಲಕ್ಷಗಳು ಮತ್ತು ಪರಿಶಿಷ್ಠ ಪಂಗಡ ಕಾಲನಿಯಲ್ಲಿ ₹೪೦ಲಕ್ಷಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್, ಕೆ.ಎನ್.ಪಾಟೀಲ್, ಚೆನ್ನಬಸಪ್ಪ ಸುಂಕದ, ಶಿವರೆಡ್ಡಿ ನಾಯಕ, ಅಯ್ಯಪ್ಪ ಉಪ್ಪಾರ, ಕೆ.ಎನ್.ಪಾಟೀಲ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ದೇವರಾಜ ಜಮಾಪುರ, ಶ್ರೀಕಾಂತ ಈಡಿಗೇರ, ಗ್ರಾಪಂ ಅಧ್ಯಕ್ಷ ಶಿವರಾಜ್, ಶರಣಪ್ಪ ಬೋವಿ, ಬಸವರಾಜ ಹೋಟೆಲ್ ಕಿಂದಿಕ್ಯಾಂಪ್‌ನ ಪಿ.ಗಣಪತಿ, ಗ್ರಾಪಂ ಉಪಾಧ್ಯಕ್ಷ ಅಚ್ಚೊಳ್ಳಿ ದ್ಯಾವಣ್ಣ, ಸದಸ್ಯ ಉದಯಭಾಸ್ಕರ್, ನೊನ್ನ ಸತ್ಯನಾರಾಯಣ, ಕೆ. ಸಿದ್ದಯ್ಯಸ್ವಾಮಿ, ಶಿವನಾರಾಯಣ, ಹನುಮಯ್ಯ ನಾಯಕ, ಹನುಮಂತಸಿಂಗ್, ಚಂದ್ರು ಉಪ್ಪಾರ, ಶಂಕ್ರಪ್ಪ, ಜಗದೀಶ ಯರಡೋಣಾ, ಸೇರಿದಂತೆ ಇನ್ನಿತರರು ಇದ್ದರು.