ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕೃಷಿ ಅಂಕಿ ಅಂಶಗಳ ಹಾಗೂ 11ನೇ ಹಂತದ ಕೃಷಿ ಗಣತಿಯ ಸಮನ್ವಯ ಸಮಿತಿಯ ಸಭೆಯು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕೃಷಿ ಅಂಕಿ ಅಂಶಗಳ ಹಾಗೂ 11 ನೇ ಹಂತದ ಕೃಷಿ ಗಣತಿಯ ಸಮನ್ವಯ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 2024-25 ನೇ ಸಾಲಿನ ಬೇಸಿಗೆ ಋತುವಿನ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಬೆಳೆ ಸಮೀಕ್ಷೆ ಪರಿಶೀಲನೆ ಸಂಬಂಧಿಸಿದಂತೆ ಮಾಹಿತಿ ನೀಡುವುದು, 11 ನೇ ಕೃಷಿ ಗಣತಿಯ ಮೂರನೇ ಹಂತದ ಬಗ್ಗೆ ಮಾಹಿತಿ ಒದಗಿಸುವುದು ಹಾಗೆಯೇ ಪ್ರಸಕ್ತ ಸಾಲಿನ ಬೆಳೆ ಕಟಾವು ಸಂಬಂಧಿಸಿದಂತೆ ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಿ.ನಾರಾಯಣ ಅವರು 2024-25ನೇ ಸಾಲಿನ ಬೇಸಿಗೆ ಋತುವಿನ ಸಿಎಸ್‌ಎಸ್‌ಟಿ ವರದಿಯಂತೆ ಗ್ರಾಮಾವಾರು, ಹೋಬಳಿವಾರು ಪರಿಶೀಲಿಸಿ ವೆಬ್ ತಂತ್ರಾಂಶದಲ್ಲಿ ಮರು ಹೊಂದಾಣಿಕೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದರು. ತಾಲೂಕು ಮಟ್ಟದ ಕೃಷಿ ಅಧಿಕಾರಿಗಳಿಂದ ದೃಢೀಕರಿಸಿ ಮರು ಹೊಂದಾಣಿಕೆ ಆಧಾರದ ಮೇಲೆ ಜಿಲ್ಲಾ ವರದಿಯನ್ನು ತಯಾರಿಸಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅವರು ಹೇಳಿದರು. 2025-26ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆ ಯೋಜನೆಯಡಿ ಜಿಲ್ಲೆಗೆ ಹಂಚಿಕೆಯಡಿ 525 ಗ್ರಾಮಗಳ ಪೈಕಿ 102 ಗ್ರಾಮಗಳಲ್ಲಿ ಸಕಾಲಿಕ ಯೋಜನೆಯಡಿ ಶೇ.1 ರಷ್ಟು ಮುಂಗಾರು ಬೆಳೆ ಸಮೀಕ್ಷೆ ಹಂಚಿಕೆಯಾಗಿದ್ದು, ಸಮೀಕ್ಷೆಯನ್ನು ಸಾಂಖ್ಯಿಕ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅವರು ತಿಳಿಸಿದರು. ಪ್ರಸಕ್ತ ಸಾಲಿನ ಹಿಂಗಾರು ಋತುವಿನ ಬೆಳೆ ಸಮೀಕ್ಷೆಯ ತರಬೇತಿ ಕಾರ್ಯ ಪೂರ್ಣಗೊಂಡಿದ್ದು, ಕ್ಷೇತ್ರ ಕಾರ್ಯ ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಡಿ.ನಾರಾಯಣ ಅವರು ಮಾಹಿತಿ ನೀಡಿದರು. ‘11 ನೇ ಕೃಷಿ ಗಣತಿಯ ಮೂರನೇ ಹಂತದ ಕ್ಷೇತ್ರ ಕಾರ್ಯಕ್ಕೆ ಜಿಲ್ಲೆಯ 26 ಗ್ರಾಮಗಳು ಆಯ್ಕೆಯಾಗಿದ್ದು, ಎಲ್ಲಾ 26 ಗ್ರಾಮಗಳ ಕ್ಷೇತ್ರ ಕಾರ್ಯ ಪೂರ್ಣಗೊಂಡಿದೆ. ಈ 26 ಗ್ರಾಮಗಳ ಕ್ರೋಢೀಕೃತ ವರದಿಯನ್ನು ಗಮನಿಸಿದಾಗ 558 ಹಿಡುವಳಿದಾರರು ಇದ್ದು, 2794 ಹೆಕ್ಟೇರ್ ಹಿಡುವಳಿ ಪ್ರದೇಶ ಹೊಂದಿದೆ ಎಂದು ಡಿ.ನಾರಾಯಣ ಅವರು ಹೇಳಿದರು.’ ಜಿಲ್ಲೆಯಲ್ಲಿ ಪಿಎಂ.ಕಿಸಾನ್ ಯೋಜನೆಯಡಿ 299 ರೈತರು ಉಪಯೋಗ ಪಡೆದಿದ್ದಾರೆ. 169 ರೈತರು ಮಣ್ಣಿನ ಆರೋಗ್ಯ ಕಾರ್ಡ್ ಪಡೆದಿದ್ದಾರೆ. ಹಾಗೆಯೇ 349 ಮಂದಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ ಎಂದು ಡಿ.ನಾರಾಯಣ ಅವರು ತಿಳಿಸಿದರು. 2025-26ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ, ಪ್ರಧಾನಮಂತ್ರಿ ಫಸಲ್ ಭಿಮಾ(ವಿಮೆ) ಯೋಜನೆಯಡಿ 476 ಬೆಳೆ ಕಟಾವು ಪ್ರಯೋಗಗಳ ಹಂಚಿಕೆಯಾಗಿದ್ದು, ಇವುಗಳ ಪೈಕಿ ಬತ್ತ(ಮಳೆಯಾಶ್ರಿತ) 336, ಬತ್ತ(ನೀರಾವರಿ) 20, ಮುಸುಕಿನ ಜೋಳ(ಮಳೆಯಾಶ್ರಿತ) 30 ಪ್ರಯೋಗಗಳ ಹಂಚಿಕೆಯಾಗಿದೆ ಎಂದು ಹೇಳಿದರು. ಇಳುವರಿಗೆ ಒಳಪಡದ ಬೆಳೆಗಳಲ್ಲಿ ಶುಂಠಿ(ಮಳೆಯಾಶ್ರಿತ) 60 ಪ್ರಯೋಗಗಳು, ಸಿಹಿಗೆಣಸು(ಮಳೆಯಾಶ್ರಿತ) 30 ಪ್ರಯೋಗಗಳು, ಇವುಗಳ ಪೈಕಿ 250 ಪ್ರಯೋಗಗಳು ಪೂರ್ಣಗೊಂಡಿದ್ದು, ಉಳಿದ 226 ಪ್ರಯೋಗಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ನಾರಾಯಣ ಅವರು ಹೇಳಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಮುತ್ತಪ್ಪ, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ವೆಂಕಟೇಶ್, ಬಿ.ಎಂ.ಗಾನವಿ, ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.