ನರಸಿಂಗರಾವ್ ಸರಕೀಲ್
ಸರ್ಕಾರದ ದ್ವಂದ್ವ ನಿಯಮ ಹಾಗೂ ಅನರ್ಹರಿಗೆ ಮಾಸಾಶನ ಮಾಡಿರುವ ಮಧ್ಯವರ್ತಿಗಳಿಂದಾಗಿ ಅರ್ಹ ಫಲಾನುಭವಿಗಳ ಮಾಸಾಶನ ಸ್ಥಗಿತಗೊಂಡಿದ್ದು, ಕಳೆದ 5- 6 ತಿಂಗಳಿನಿಂದ ಪರದಾಡುತ್ತಿದ್ದಾರೆ.
ವೃದ್ಧಾಪ್ಯ, ವಿಧವಾ ವೇತನ, ವಿಕಲಚೇತನ, ಸಂಧ್ಯಾಸುರಕ್ಷಾ ಫಲಾನುಭವಿಗಳಿಗೆ ಕಳೆದ ಮಾರ್ಚ್‌ನಿಂದ ಮಾಸಾಶನ ಸ್ಥಗಿತಗೊಂಡಿದೆ. ಅನರ್ಹ ಫಲಾನುಭವಿ ಗಳೇ ಹೆಚ್ಚು ಮಾಸಾಶನ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಗುಮಾನಿ ಆಧರಿಸಿ ಫಲಾನುಭವಿಗಳ ದಾಖಲೆ ಮತ್ತು ಭೌತಿಕ ಪರಿಶೀಲನೆಗೆ ಸರ್ಕಾರ ಸೂಚಿಸಿದೆ.ದೇವದುರ್ಗ ಮತ್ತು ಅರಕೇರಾ ತಾಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ ಗ್ರಾಮ ಲೆಕ್ಕಿಗರ ಮೂಲಕ ತಿಳಿವಳಿಕೆ ಪತ್ರ ನೀಡಲಾಗಿದೆ. ಫಲಾನುಭವಿಗಳು ತಮ್ಮ ಅಗತ್ಯ ದಾಖಲೆಗಳನ್ನು ತಹಸೀಲ್ ಕಚೇರಿಗೆ ಸಲ್ಲಿಸಿದ್ದಾರೆ.
ಪರಿಣಾಮ ಇಲಾಖೆ ತನಿಖೆಗೆ ಒಳಪಡಿಸಿದ್ದು, ಹಗರಣಕ್ಕೆ ಕಾರಣರಾದ ಗ್ರೇಡ್-2 ತಹಸೀಲ್ದಾರರನ್ನು ಅಮಾನತುಗೊಳಿಸಿದೆ. ಸರಕಾರದ ಸೂಚನೆ ಮೇರೆಗೆ ಭೌತಿಕ ಪರಿಶೀಲನೆ ಕಾರ್ಯದಲಿ ಈಗಾಗಲೇ 20 ಸಾವಿರ ಫಲಾನುಭವಿಗಳಿಗೆ ಮಾಸಾಶನ ರದ್ದುಗೊಳಿಸಿದೆ. ಕೆಲವರಿಗೆ ಹಣ ಮರುಪಾವತಿ ಮಾಡುವಂತೆ ನೋಟಿಸ್‌ಗಳನ್ನು ಕೂಡ ನೀಡಲಾಗಿದೆ.
ಕಾರಣ ಕೂಡಲೇ ಜಿಲ್ಲಾಧಿಕಾರಿಗಳು ವಿಶೇಷ ಗಮನ ಹರಿಸಿ ಭೌತಿಕ ಪರಿಶೀಲನೆ ಕಾರ್ಯ ಚುರುಕುಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ಸ್ಥಗಿತಗೊಂಡಿರುವ ಮಾಸಾಶನವನ್ನು ಮಂಜೂರುಗೊಳಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಸರ್ಕಾದ ಸೂಚನೆ ಮೇರೆಗೆ ಮಾಸಾಶನ ಫಲಾನುಭವಿಗಳ ಭೌತಿಕ ಪರಿಶೀಲನೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಶೇ.50ರಷ್ಟು ಫಲಾನುಭವಿಗಳ ದಾಖಲಾತಿ ಗಳ ಪರಿಶೀಲನೆ ಪ್ರಗತಿಯಲ್ಲಿದೆ. ಅನರ್ಹ ಫಲಾನುಭವಿ ಗಳ ಆದೇಶ ರದ್ದುಪಡಿಸಲಾಗಿದೆ. ಅರ್ಹ ಫಲಾನುಭವಿಗಳ್ಯಾರು ಆತಂಕಕ್ಕೆ ಒಳಗಾಗಬಾರದು. ಮುಂದಿನ ತಿಂಗಳಿನಿಂದ ಅರ್ಹರ ಫಲಾನುಭವಿಗಳ ಅಕೌಂಟ್‌ಗೆ ಹಣ ಜಮೆಗೊಳ್ಳಲಿದೆ ಎಂದು ದೇವದುರ್ಗ ತಹಸೀಲ್ದಾರ್ ನಾಗಮ್ಮ ಎಂ.ಕಟ್ಟೀಮನಿ ಹೇಳಿದರು.