;Resize=(412,232))
ಬೆಂಗಳೂರು : ಚಲನಚಿತ್ರ ನಿರ್ದೇಶಕನನ್ನು ಅಪಹರಿಸಿ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ಹಣ ದೋಚಿದ ಪ್ರಕರಣದ ಸಂಬಂಧ ನಟಿ ಸೇರಿ 11 ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇವೆಂಟ್ ಮ್ಯಾನೇಜ್‌ಮೆಂಟ್ ಕೆಲಸ ಮಾಡುವ ಆಶೀರ್ವಾದ (26) ಮೂವಿ ಪ್ರೊಡಕ್ಷನ್ ಲಕ್ಷ್ಮಿ ನಾರಾಯಣ (36), ಕೋಳಿ ಫಾರ್ಮ್ ನಡೆಸುವ ಸುಜನ್(21), ಬ್ಲಿಂಕಿಟ್ ಮ್ಯಾನೇಜರ್ ಚರಣ್ (26), ವಿದ್ಯುತ್ ಕೆಲಸ ಮಾಡುವ ಅರ್ಸಲಾನ್(20) ಮತ್ತು ಮೊಹಮ್ಮದ್ ಆರೀಫ್ (31), ಗಾರೆ ಕೆಲಸ ಉಸ್ತುವಾರಿ ಧ್ರುವಾ (26), ಬಿಕಾಂ ವಿದ್ಯಾರ್ಥಿ ಸಂಜಯ್(24), ಬಿಬಿಎ ವಿದ್ಯಾರ್ಥಿಗಳಾದ ಶಾಹಿದ್ ಅಹ್ಮದ್ (21) ಮತ್ತು ರಿಯಾನ್ (20) ಮತ್ತು ನಟಿ ಐಶ್ವರ್ಯ (30) ಬಂಧಿತರು.ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಆರು ಮೊಬೈಲ್ ಫೋನ್, ಚಿನ್ನದ ಒಡವೆಗಳು, ಕಾರು ಮತ್ತು ನಗದನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿತ್ರ ನಿರ್ದೇಶಕ ಅನಿಶ್ ನೀಡಿದ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಫೆ.9 ರಂದು ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಅನಿಶ್ ಅವರನ್ನು ಅಪಹರಿಸಿ ಬ್ಯಾಡರಹಳ್ಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟು ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್‌ನಿಂದ ತೀವ್ರವಾಗಿ ಹಲ್ಲೆ ಮಾಡಿ ಅವರು ಧರಿಸಿದ್ದ 20 ಗ್ರಾಂ ಚಿನ್ನದ ಒಡವೆ ಮತ್ತು 30 ಸಾವಿರ ನಗದು, 5 ಸಾವಿರ ಅಕೌಂಟ್‌ನಿಂದ ವರ್ಗಾಯಿಸಿಕೊಂಡಿದ್ದರು. ನಂತರ ಆತನನ್ನು ಕಾರಿನಲ್ಲೇ ತುಮಕೂರಿನ ಮಂದಾರಗಿರಿ ಬೆಟ್ಟದ ಬಳಿ ಕರೆದುಕೊಂಡು ಹೋಗಿ ಅಲ್ಲೂ ಹಲ್ಲೆ ಮಾಡಿ ಬಿಟ್ಟು ಕಳುಹಿಸಿದ್ದರು. ಬಳಿಕ ಅನಿಶ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈಗೆ ಸ್ಥಳಾಂತರಗೊಂಡಿದ್ದ ನಿರ್ದೇಶಕ:
ಅಪಹರಣಕ್ಕೊಳಗಾಗಿದ್ದ ಅನಿಶ್ ಯುವ ನಿರ್ದೇಶಕನಾಗಿದ್ದು, ಈ ಹಿಂದೆ ‘ಭರವಸೆಯೇ ಜೀವನ’ ಸೇರಿ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ‘ಜೀವನದ ಭಾಷೆ’ ಎಂಬ ಹೊಸ ಚಲನಚಿತ್ರ ನಿರ್ದೇಶಿಸಲು ಮುಂದಾಗಿದ್ದರು, ಕೆಲ ಕಾರಣಗಳಿಂದಾಗಿ ಆ ಸಿನಿಮಾ ನಿಂತ ಬಳಿಕ ಅವರು ಮುಂಬೈಗೆ ಸ್ಥಳಾಂತರಗೊಂಡಿದ್ದರು. ನಟಿ ಐಶ್ವರ್ಯ ಭೀಮಾ ಚಿತ್ರದಲ್ಲಿ ನಟಿಸಿದ್ದರು ಎಂದು ತಿಳಿದು ಬಂದಿದೆ.
ಅನಿಶ್ ಅವರು ತಮ್ಮ ಕಾರು ಮಾರಾಟ ಮಾಡುವ ಉದ್ದೇಶದಿಂದ ಪರಿಚಯವಿದ್ದ ನಟಿ ಐಶ್ವರ್ಯಗೆ ಹೇಳಿದ್ದರು. ಇದೇ ಮಾಹಿತಿ ಬಳಸಿಕೊಂಡ ಆರೋಪಿಗಳು ನಟಿ ಮೂಲಕ ಅನಿಶ್ ಅವರನ್ನು ಸಂಪರ್ಕಿಸಿದ್ದರು. ಕಾರು ಖರೀದಿ ಮಾಡುವ ನೆಪದಲ್ಲಿ ಕರೆ ಮಾಡಿ, ನಟಿಯ ಮೂಲಕವೇ ಅನಿಶ್ ಅವರನ್ನು ಮುಂಬೈನಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದರು.
ನಿರ್ದೇಶಕ ಅನಿಶ್ ಅವರೊಂದಿಗೆ ಹಣಕಾಸು ವಿಚಾರವಾಗಿ ಆರೋಪಿಗಳಾದ ಐಶ್ವರ್ಯ, ಆಶೀರ್ವಾದ್ ಗಲಾಟೆ ಮಾಡಿಕೊಂಡಿದ್ದಾರೆ. ಹೀಗಾಗಿ ಉಳಿದ ಆರೋಪಿಗಳ ಜತೆ ಸೇರಿ ನಿರ್ದೇಶಕನನ್ನು ಅಪಹರಿಸಿ ಹಲ್ಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಕಾರು ಮಾರಾಟ ಮಾಡಿಕೊಡುವುದಾಗಿ ನಟಿ ಐಶ್ವರ್ಯ ಮುಂಬೈನಿಂದ ಅನಿಶ್‌ನನ್ನು ಕರೆಸಿಕೊಂಡು ಅಪಹರಣ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.