ಸರದೇಶಪಾಂಡೆ ಅವರ ಆದಿರಂಗದ ಫೋಠೋಗಳು....

KannadaprabhaNewsNetwork |  
Published : Sep 30, 2025, 12:00 AM IST
ಆದಿರಂಗ | Kannada Prabha

ಸಾರಾಂಶ

ನಮ್‌ (ಉತ್ತರ ಕರ್ನಾಟಕ) ಮಕ್ಕಳು ಭಾಳ ಶಾಣ್ಯಾ ಇರ್ತಾರ.. ಆದ್ರ ಅವರಿಗೆ ಅವಕಾಶನೇ ಸಿಗಲ್ಲ. ಅವರಿಗೆ ಸರಿಯಾಗಿ ತರಬೇತಿ ನೀಡಿದ್ರ ಸಾಕಷ್ಟು ಮುಂದ ಬರ್ತಾವ್‌.. ಸಾಕಷ್ಟು ಅವಕಾಶ ಸಿಗತಾವ್‌.. ಎಂದು ರಂಗಕರ್ಮಿ ಯಶವಂತ ಸರದೇಶಪಾಂಡೆ ಹೇಳುತ್ತಿದ್ದರು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ನಮ್‌ ಸಾರ್‌ ಇಲ್ಲೇ ಗಂಟೆಗಟ್ಟಲೇ ಸುಮ್ಮನ ಕುಂದ್ರತ್ತಿದ್ದರು ರೀ.. ಈ ಆದಿರಂಗ ಥೇಟರ್ಸ್‌ನೊಳಗ ಇರುವ ವಸ್ತುಗಳನ್ನೆಲ್ಲ ನೋಡ್ಕೊಂತ ಇರ್ತಾ ಇರ್ತಿದ್ದರು.. ಈಗ ಅವರ ಇಲ್ಲ. ಇನ್ಮ್ಯಾಲೆ ಅವರು ಬರಂಗಿಲ್ಲ.. ಆದಿರಂಗಾನೂ ಅನಾಥ ಆತು. ನಾನೂ ಅನಾಥ ಆದೆ...!ಇದು ರಂಗಭೂಮಿ ಕಲಾವಿದ, ನಟ-ನಿರ್ದೇಶಕ, ಸಂಭಾಷಣಾಕಾರ ಯಶವಂತ ಸರದೇಶಪಾಂಡೆ ಅವರು ಉತ್ತರ ಕರ್ನಾಟಕ ಪ್ರತಿಭೆಗಳನ್ನು ಗುರುತಿಸುವ, ಕಲಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ತೆರೆದಿದ್ದ "ಆದಿರಂಗ " ಕಲಾಶಾಲೆಯ ಕಾವಲುಗಾರ ರವಿ ನುಡಿಯುವ ಮಾತುಗಳು.

ಇಷ್ಟು ಹೇಳಬೇಕೆಂದ್ರೆ ಆತನ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ಮಾಲೀಕನನ್ನು ಕಳೆದುಕೊಂಡ ದುಃಖ ಆತನ ಮುಖದಲ್ಲಿ ಮಡುಗಟ್ಟಿತ್ತು.ಅನಾಥ ಆದಿರಂಗ!

ನಮ್‌ (ಉತ್ತರ ಕರ್ನಾಟಕ) ಮಕ್ಕಳು ಭಾಳ ಶಾಣ್ಯಾ ಇರ್ತಾರ.. ಆದ್ರ ಅವರಿಗೆ ಅವಕಾಶನೇ ಸಿಗಲ್ಲ. ಅವರಿಗೆ ಸರಿಯಾಗಿ ತರಬೇತಿ ನೀಡಿದ್ರ ಸಾಕಷ್ಟು ಮುಂದ ಬರ್ತಾವ್‌.. ಸಾಕಷ್ಟು ಅವಕಾಶ ಸಿಗತಾವ್‌.. ಅಂತ ಹೇಳುತ್ತಿದ್ದ ಸರದೇಶಪಾಂಡೆ ಅವರು, ಈ ಭಾಗದ ಮಕ್ಕಳಿಗೆ ನಟನೆ, ನೃತ್ಯ ತರಬೇತಿ ನಿರ್ದೇಶನ ತರಬೇತಿ ನೀಡಬೇಕೆಂಬ ಉದ್ದೇಶದಿಂದ 2015ರಿಂದಲೇ ಪ್ರಯತ್ನ ಶುರು ಮಾಡಿದರು. ಇಲ್ಲಿನ ಲೋಹಿಯಾನಗರ ಕೆರೆ ದಂಡೆಯಲ್ಲಿ ಜಾಗೆಯನ್ನು ಹಿಡಿದು ಹಾಗೋ, ಹೀಗೋ ಅವರಿವರ ನೆರವು ಪಡೆದು "ಆದಿರಂಗ ಕಲಾಶಾಲೆ " (Adi Ranga Theatre School- ARTS)ಯನ್ನು ತೆರೆದಿದ್ದರು. ಪುಸ್ತಕಗಳ ದೊಡ್ಡ ಸಂಗ್ರಹದ ಗ್ರಂಥಾಲಯವೆನಿಸಿರುವ ಬೇಂದ್ರೆ ರಂಗ, ಕಲಿಕೆಯ ಸಭಾಂಗಣ ವಿಜಯರಂಗ, ತರಬೇತಿ ನೀಡುವ ಅನಂತರಂಗ, ಮಕ್ಕಳ ವಾಸ್ತವ್ಯದ ಶ್ರೀಕಲಾ ರಂಗ ಹೀಗೆ ಎಲ್ಲವೂ ತಲೆ ಎತ್ತಿ ನಿಂತವು.2021ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರೇ ಇದನ್ನು ಉದ್ಘಾಟಿಸಿದರು. ಮುಂದೆ ಕೆಲದಿನ ಕಲಾ ಶಾಲೆಯಲ್ಲಿ ಮಕ್ಕಳ ಕಲರವ ಕೇಳಿ ಬರಲಾರಂಭಿಸಲಾಯಿತು. ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಕಲಾವಿದರು 15-20 ದಿನಗಟ್ಟಲೇ ಉಳಿದು ಮಕ್ಕಳಿಗೆ ತರಬೇತಿ ನೀಡಿದ್ದು ಆಯ್ತು. ಆದರೆ ಮುಂದೆ ಏನಾಯ್ತೋ ಏನೋ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ತರಬೇತಿ ಪಡೆಯಲು ಆಸಕ್ತಿ ತೋರಲಿಲ್ಲ. ಆಗಾಗ ಒಂದಿಷ್ಟು ಗುಂಪು ಬರುತ್ತಿತ್ತು. ಸಣ್ಣ ಪುಟ್ಟ ತರಬೇತಿ ಪಡೆದು ತೆರಳುತ್ತಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕಲಿಯಬೇಕೆಂಬ ಆಸಕ್ತಿ ಮಕ್ಕಳು, ಪಾಲಕರಿಂದ ವ್ಯಕ್ತವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಆದಿರಂಗಕ್ಕೆ ಬೀಗ ಬಿತ್ತು. ರಂಗಮಂದಿರ ಪಾಳು ಬಿದ್ದಂತಾಯಿತು.

ತಮ್ಮ ಕನಸಿನ ಆದಿರಂಗ ಪಾಳು ಬಿದ್ದಂತಾಗಿರುವುದು ಸರದೇಶಪಾಂಡೆಗೆ ಬಹಳ ವೇದನೆಯಾಗುತ್ತಿತ್ತು. ಆದರೂ ಹಾಸ್ಯನಟನಾಗಿ ಎಲ್ಲರನ್ನು ಸದಾ ನಗಿಸುತ್ತಾ ಕಾಲ ಕಳೆಯುತ್ತಿದ್ದ ಸರದೇಶಪಾಂಡೆ ಮಾತ್ರ ತಮ್ಮ ನೋವನ್ನು ಯಾರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಬದಲಿಗೆ ಮುಂದೆ ಸರಿಯಾಗುತ್ತದೆ. ರಾಜ್ಯದಲ್ಲೇ ದೊಡ್ಡ ರಂಗ ಕಲಾಶಾಲೆಯಾಗಿ ಹೊರಹೊಮ್ಮುತ್ತದೆ ಎಂಬ ಆಶಾಭಾವನೆಯನ್ನು ಬಿಡಲಿಲ್ಲ. ಆದರೆ, ಮೇಲ್ಮಾತಿನಲ್ಲಿ ಹೀಗೆ ಹೇಳುತ್ತಿದ್ದರಾದರೂ ನಿರೀಕ್ಷಿತ ಮಟ್ಟದಲ್ಲಿ ಆದಿರಂಗ ಬೆಳೆಯಲಿಲ್ಲ ಎಂಬ ದುಃಖ ಮಾತ್ರ ಅವರಿಂದ ದೂರವಾಗಲೇ ಇಲ್ಲ. ಹೀಗಾಗಿ ಹುಬ್ಬಳ್ಳಿಗೆ ಬಂದಾಗಲೊಮ್ಮೆ ಆದಿರಂಗದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆದಿರಂಗದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಕಲಾ ಶಾಲೆಯಲ್ಲಿ ಎಲ್ಲ ವಸ್ತುಗಳನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುತ್ತಿದ್ದರು. ಗಂಟೆಗಟ್ಟಲೇ ಕುಳಿತು ಸಂಗ್ರಹಿಸಿದ್ದ ಪುಸ್ತಕಗಳನ್ನು ತಿರುವಿಹಾಕುತ್ತಿದ್ದರು. ಲೈಟಿಂಗ್‌, ನಟನಾ ಕೌಶಲ್ಯ ಹೆಚ್ಚಿಸುವ ವಸ್ತುಗಳನ್ನೆಲ್ಲ ಗಂಟೆಗಟ್ಟಲೇ ನೋಡುತ್ತಿದ್ದರು. ಆಗೆಲ್ಲ ಕಾವಲುಗಾರ ರವಿಯೇ ಸಾರ್‌ ಚಹಾ ಹೇಳೇನು ಎಂದು ಕೇಳುತ್ತಾ ಆಗಾಗ ಎದುರುಗಡೆಯಲ್ಲಿ ಡಬ್ಬಾ ಅಂಗಡಿಯಲ್ಲಿನ "ಶುಗರ್‌ಲೆಸ್‌ " ಕಾಫಿ ಅಥವಾ ಚಹಾ ತಂದುಕೊಡುತ್ತಿದ್ದನಂತೆ. ಇತ್ತೀಚಿಗಷ್ಟೇ ಆದಿರಂಗದಲ್ಲಿನ ವಸ್ತುಗಳನ್ನು ಹಾಗೆ ಬಿಟ್ಟರೆ ಹಾಳಾಗುತ್ತವೆ ಎಂದುಕೊಂಡು ಅವುಗಳನ್ನೆಲ್ಲ ಪ್ಯಾಕ್‌ ಮಾಡಿಸಿ ಒಂದೆಡೆ ಇರಿಸಿದ್ದರಂತೆ. ಕಪಾಟಿನಲ್ಲಿನ ಪುಸ್ತಕಗಳು ಮಾಲೀಕನಿಲ್ಲದೇ ಧೂಳು ತಿನ್ನುತ್ತಿವೆ.ಮಾಲೀಕನಿಲ್ಲ ಎಂಬ ಬೇಸರ ಕಾವಲುಗಾರ ರವಿ ಮೊಗದಲ್ಲಿ ಎದ್ದು ಕಾಣುತ್ತಿತ್ತು. ನಮ್‌ ಸರ್‌ ಹೋಗಿಬಿಟ್ಟರ್ರಂತೆ. ಮೊನ್ನೆ ಅಷ್ಟೇ ಬಂದಿದ್ದರು. ಈಗ ಈ ಆದಿರಂಗವೂ ಅನಾಥ ಆಯ್ತು.. ನಾನೂ ಅನಾಥ ಆದೆ ನೋಡಿ ಸರ್‌.. ಎಂದೆನ್ನುತ್ತಾ ಕಣ್ಣೀರು ಒರೆಯಿಸಿಕೊಳ್ಳುತ್ತಿದ್ದ.

ಅನಾಥವಾಗಿರುವ ಆದಿರಂಗವನ್ನು ಮೇಲಕ್ಕೆತ್ತುವ ಕೆಲಸ ಆಗಬೇಕಿರುವುದಂತೂ ಸತ್ಯ.!

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ