ಗದಗ: ಅಂಗವಿಕಲತೆ ಬಗೆಗೆ ತಿರಸ್ಕಾರ ಬೇಡ, ಪುರಸ್ಕಾರವಿರಲಿ. ಸಮಾಜದಲ್ಲಿ ಈ ಕುರಿತು ತಿಳಿವಳಿಕೆ ಮೂಡಿಸಿ ಪರಿವರ್ತನೆಗಾಗಿ ಪ್ರಯತ್ನಿಸೋಣ. ಅಂಗವಿಕಲತೆಯು ಸಾಧನೆಗೆ ಸಮಸ್ಯೆಯಲ್ಲ. ಇಂತಹ ಸಾಧಕರನ್ನು ಸನ್ಮಾನಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿ ಇತ್ತೀಚೆಗೆ ಜರುಗಿದ ವಿಶೇಷಚೇತನ ವ್ಯಕ್ತಿಗಳೊಂದಿಗೆ ಸಂಭ್ರಮ ಶನಿವಾರ-ಬ್ಯಾಗ್ ರಹಿತ ದಿನ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲೆಯ ಎಲ್ಲ ಮಕ್ಕಳು ತರಗತಿಯ ಕೋಣೆಗಳಲ್ಲಿ ಅಂಗವೈಕಲ್ಯತೆಯುಳ್ಳ ವಿದ್ಯಾರ್ಥಿಗಳೊಂದಿಗೆ ಆರೋಗ್ಯಕರ ಹಾಗೂ ಅರ್ಥಪೂರ್ಣ ಸಂಬಂಧವನ್ನು ಬೆಳೆಸಿಕೊಂಡು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಪರಸ್ಪರ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ನಾವು ಮುಂದಾಗಬೇಕಿದೆ. ಮಕ್ಕಳು ಬೆಳೆಯುತ್ತಲೇ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಆದರ್ಶ ವ್ಯಕ್ತಿಗಳಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ ಮಣ್ಣೂರ ಮಾತನಾಡಿ, ಅರಿವು, ಅನುಭವ, ಅಂಶಗಳನ್ನು ಅಳವಡಿಸಿಕೊಂಡು ಪ್ರತಿ ತಿಂಗಳ 3ನೇ ಶನಿವಾರ ಎಲ್ಲ ಶಾಲೆಗಳಲ್ಲಿ ಸರ್ಕಾರದ ಆದೇಶದ ಅನ್ವಯ ಬ್ಯಾಗ್ ಲೆಸ್ ಡೇ ಆಚರಿಸಲಾಗುತ್ತಿದ್ದು ಅಂದು ಮಕ್ಕಳು ವಿಷಯ ಅನುಸಾರ ಎಲ್ಲವನ್ನು ತಾವೇ ನಿರ್ವಹಿಸುವುದರ ಜೊತೆಗೆ ವಿಷಯವನ್ನು ಮನನ ಮಾಡಿಕೊಳ್ಳಬೇಕು ಎಂದರು.ಈ ವೇಳೆ ಶಿಕ್ಷಕಿ ಪರಿಮಳಾ ಮಣ್ಣೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ವಿಶೇಷ ಚೇತನರ ಅರಿವು-ಜಾಗೃತಿ ಕುರಿತು ಕಿರು ನಾಟಕ ಪ್ರದರ್ಶನಗೊಂಡಿತು.
ರೇಣುಕಾ ಉಮಚಗಿ, ಶೇಖಮ್ಮ ಕಮತರ, ಮೀರಾಬಾಯಿ ಭಾವಿಕಟ್ಟಿ, ಬಸಮ್ಮ ಗಡ್ಡೆಪ್ಪನವರ, ಲಕ್ಷ್ಮವ್ವ ಹಿರೇಮಠ, ಗಿರಿಜಾ ಪಲ್ಲೇದ, ಶಾಂತಾ ತೆಲಗಾಂವಿ, ಲಕ್ಷ್ಮೀ ಹಂಜಗಿಮಠ, ಟಿ.ಎಂ. ಪುರುಷನ್, ಜ್ಯೋತಿ ಭಾವಿಕಟ್ಟಿ, ಗೀತಾ ನಲವಡೆ, ಅಮೀನಾ ನದಾಫ, ಯೋಗೇಶ್ವರಿ ಭಾವಿಕಟ್ಟಿ, ನಿರ್ಮಲಾ ಹುಣಸಿ ಮುಂತಾದವರಿದ್ದರು.ಶಿಕ್ಷಕಿ ಎಸ್.ಎಸ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ. ಬಾಗೂರ ಸ್ವಾಗತಿಸಿದರು. ಸಿ.ಕೆ. ಕಾಳೆ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಅನಂತಪೂರ ವಂದಿಸಿದರು.