ಸಂಡೂರು: ವಿಶೇಷಚೇತನರಿಗೆ ತರಬೇತಿ ನೀಡಿ, ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ತಮನ್ನಾ ಶಾಲೆಯ ಕಾರ್ಯ ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್ ಹೇಳಿದರು.
ವಿಶೇಷ ಮಕ್ಕಳ ಶಾಲೆಯಲ್ಲಿ ಅರಿವಿನ ವಿಕಲಾಂಗತೆ, ಬೌದ್ಧಿಕ ಮತ್ತು ಮಾನಸಿಕ ವಿಕಲಾಂಗತೆ, ಸಂವೇದನಶೀಲ ಮತ್ತು ಹುಟ್ಟಿನ ವಿಕಲಾಂಗತೆ ಇರುವ ೧೧೩ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಶಾಲೆಯಲ್ಲಿ ಉಚಿತ ಶಿಕ್ಷಣ ಮತ್ತು ಪೌಷ್ಟಿಕ ಆಹಾರ ನೀಡುವುದರೊಟ್ಟಿಗೆ ಅವರನ್ನು ದೈನಂದಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಜೆಎಸ್‌ಡಬ್ಲ್ಯೂ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ವಿಶೇಷಚೇತನರ ಕಲ್ಯಾಣ ಅಧಿಕಾರಿ ಎಚ್.ಎಂ. ಗೋವಿಂದಪ್ಪ ಮಾತನಾಡಿ, ಪೋಷಕರು ತಮ್ಮ ಮಕ್ಕಳು ಸಕ್ರಿಯವಾಗಿರುವಂತೆ ಮಾಡಲು ಅವರು ಮಾಡುವಂತಹ ಸಣ್ಣಪುಟ್ಟ ಕೆಲಸಗಳನ್ನು ಗುರುತಿಸಿ, ಕೆಲಸ ನೀಡಬೇಕು. ನಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಈಗಾಗಲೇ ನೀಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಅಗತ್ಯ ನೆರವು ಮತ್ತು ಸಹಕಾರ ನೀಡಲಾಗುವುದು ಎಂದರು.ಜೆಎಸ್‌ಡಬ್ಲ್ಯೂ ಫೌಂಡೇಶನ್ ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, ಕಳೆದ ವಾರದಲ್ಲಿಯೂ ಸಂಡೂರು ತಾಲೂಕಿನ ೭೦ಕ್ಕೂ ಹೆಚ್ಚು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಜೆಎಸ್‌ಡಬ್ಲ್ಯೂ ಫೌಂಡೇಶನ್ ವತಿಯಿಂದ ವಿಶೇಷ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ಅವರಿಗೆ ಪೋಷಣೆ ಮತ್ತು ರಕ್ಷಣೆ ಮಾಡುವ ವಿಧಾನಗಳನ್ನು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಶೇಷಚೇತನ ಮಕ್ಕಳ ಸಮಗ್ರ ಬೆಳವಣಿಗೆಗೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ವಿಶೇಷಚೇತನ ಮಕ್ಕಳು ವಿವಿಧ ನಾಟಕ ಮತ್ತು ನ್ಯತ್ಯ ಪ್ರದರ್ಶನಗಳನ್ನು ಮಾಡಿದರು. ಎಲ್ಲ ಮಕ್ಕಳಿಗೆ ಉಚಿತವಾಗಿ ಬ್ಯಾಗ್‌ಗಳನ್ನು ನೀಡಲಾಯಿತು. ತಮನ್ನಾ ಶಾಲೆಯ ಸಿಬ್ಬಂದಿ ಸವಿತಾ, ಸುಧೀರ್ ಮತ್ತು ಪಾಲಕರು ಉಪಸ್ಥಿತರಿದ್ದರು.
ಸಂಡೂರು ತಾಲೂಕಿನ ತೋರಣಗಲ್ಲಿನ ತಮನ್ನಾ ವಿಶೇಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ವಿಶ್ವವಿಶೇಷ ಮಕ್ಕಳ ದಿನಾಚರಣೆ ಕಾರ್ಯಕ್ರಮ ಜರುಗಿತು.