ಮಂಗಳೂರು: ಊಟ ಮಾಡದೆಯೇ ಋಷಿಗಳಂತೆ ತಪಸ್ಸನ್ನು ಆಚರಿಸುವುದು ಒಂದು ವಿಧವಾದರೇ, ಸರಿಯಾದ ಕ್ರಮದಲ್ಲಿ ಊಟ ಮಾಡುವ ಮೂಲಕವೂ ತಪಸ್ಸಿನ ಫಲವನ್ನು ಪಡೆಯಬಹುದು ಎಂದು ಯೋಗಶಾಸ್ತ್ರ ಹೇಳಿದೆ. ಹಾಗಾಗಿ ಭೋಜನವೆಂಬುದು ತಪಸ್ಸು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ತಿಳಿಸಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆ. 8ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು.

ಪಾಪದ ದಾರಿಗಳಲ್ಲಿ ಆಹಾರವೇ ಪ್ರಧಾನವಾಗಿದ್ದು, ಪಾಪ‌ ನಮ್ಮೊಳಗೆ ಸೇರಿದ ನಂತರ ಬಾಧೆಯನ್ನು ನೀಡಲು ಆರಂಭಿಸುತ್ತದೆ. ಸರಿಯಾದ ಭೋಜನ ಕ್ರಮದಿಂದ ರೋಗ ಹಾಗೂ ಪಾಪ ಎರಡನ್ನೂ ನಾಶ ಮಾಡಬಹುದು. ಯಾವುದು ಒಳ್ಳೆಯದೋ ಅದು ಹಿತ ಹಾಗೂ ಯಾವುದು ಇಷ್ಟವೋ ಅದು ಪ್ರಿಯ. ಹಿತವಾದದ್ದೇ ಪ್ರಿಯವಾದರೆ ದೇಹಕ್ಕೂ ಮನಸ್ಸಿಗೂ ಹಿತ ಎಂದು ಅಭಿಪ್ರಾಯಪಟ್ಟರು.ದೇಹದ ಒಳಗೆ ಹೋಗುವ ಶ್ವಾಸ ಹಾಗೂ ಆಹಾರದಿಂದಲೇ ದೇಹದ ಒಳಗಿನ ಪಾಪವನ್ನು ನಾಶಮಾಡಲು ಸಾಧ್ಯ. ವಿಧಿಪೂರ್ವಕವಾದ ಪ್ರಾಣಾಯಾಮ ಹಾಗೂ ಸಮರ್ಪಕ ಆಹಾರ ಕ್ರಮದಿಂದ ದೇಹದ ಪಾಪವನ್ನು ತೊಳೆದುಕೊಳ್ಳಬಹುದು ಎಂದರು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಕರ್ಣಾಟಕ ಬ್ಯಾಂಕಿನ ಸಿಒಒ ಬಿ.ಎಸ್ ರಾಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು.

ರಾಮಮೂರ್ತಿ ಕೆ.ಬಿ. ದಂಪತಿಗಳು ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುರೇಶ ಕಲ್ಲಬ್ಬೆ, ಉದಯ ಭಟ್, ಕಿರಣ ಹೆಗಡೆ, ದಿನ ಪ್ರಧಾನರಾದ ಗುಂಡಿ ಮಂಜಪ್ಪ ದಂಪತಿ ಉಪಸ್ಥಿತರಿದ್ದರು.