ಪರಶಿವಮೂರ್ತಿ ಮಾಟಲದಿನ್ನಿ
ತಾಲೂಕಿನ ಕ್ಯಾದಿಗುಪ್ಪ ಗ್ರಾಪಂ ವ್ಯಾಪ್ತಿಯ ಗೋತಗಿ ಗ್ರಾಮದ ವಿಶ್ವನಾಥ ಚಿದಾನಂದಪ್ಪ ಬಡಿಗೇರ ಎಂಬ 30 ವರ್ಷದ ಯುವಕ ಹುಟ್ಟಿನಿಂದಲೆ ಅಂಗವಿಕಲನಾಗಿದ್ದು, ದೈಹಿಕ ಸವಾಲು, ಬಡತನ, ಕುಟುಂಬ ಆರ್ಥಿಕ ಸಂಕಷ್ಟ ಮತ್ತು ತಂದೆ-ತಾಯಿಯ ಅನಾರೋಗ್ಯ... ಹೀಗೆ ಅನೇಕ ಕಷ್ಟ ಮೆಟ್ಟಿ ನಿಂತು ಜೀವನದಲ್ಲಿ ಬರುವ ಎಲ್ಲ ಸವಾಲು ಎದುರಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ.
ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಯುವಕ ಬಡಕುಟುಂಬದಲ್ಲಿ ಜನಿಸಿರುವುದು ಒಂದೆಡೆಯಾದರೆ ಹುಟ್ಟಿನಿಂದಲೆ ಬಂದ ಅಂಗವೈಕಲ್ಯ ಸವಾಲಾಗಿ ಬಂತು.ಜೀವನೋಪಾಯಕ್ಕಾಗಿ ಬೆಂಗಳೂರ ನಗರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಸಿಕ ₹9000 ಸಂಬಳವಿದ್ದರೂ ಬಾಡಿಗೆ ಮತ್ತು ಊಟದ ವೆಚ್ಚಗಳ ನಂತರ ಉಳಿಯುತ್ತಿದ್ದ ಹಣ ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ ತಮ್ಮ ಸ್ವಗ್ರಾಮಕ್ಕೆ ಮರಳಿದರು. ಕೂಲಿ ಕೆಲಸ ಮಾಡುತ್ತಿದ್ದ ತಂದೆ-ತಾಯಿ ಅನಾರೋಗ್ಯಕ್ಕೆ ಈಡಾದರು. ಮನೆಯ ಜವಾಬ್ದಾರಿ ಸಂಪೂರ್ಣ ವಿಶ್ವನಾಥ್ ಮೇಲೆ ಬಿದ್ದಿತು. ನಿರಾಶರಾಗದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಆರಂಭಿಸಿದ ಅವರು, ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕುಡಿಯುವ ನೀರು ಒದಗಿಸುವುದು ಹಾಗೂ ತನ್ನ ಕೈಲಾದ ಕೆಲಸ ನಿರ್ವಹಿಸುವ ಮೂಲಕ ಯೋಜನೆಯಿಂದ ದೊರೆಯುವ ಆದಾಯ ಮನೆ ಖರ್ಚು ಹಾಗೂ ತಂದೆ-ತಾಯಿ ಆರೈಕೆಗೆ ಬಳಸುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ, ಆತ್ಮವಿಶ್ವಾಸವಿದ್ದರೆ ಯಾವುದೇ ಸಂಕಷ್ಟ ಜಯಿಸಬಹುದು ಎಂಬುದನ್ನು ವಿಶ್ವನಾಥ ಬಡಿಗೇರ ಜೀವನ ಸ್ಪಷ್ಟವಾಗಿ ತೋರಿಸುತ್ತದೆ. ಉದ್ಯೋಗ ಖಾತ್ರಿ ಯೋಜನೆ ಬದುಕಿಗೆ ಕೇವಲ ಉದ್ಯೋಗವನ್ನಷ್ಟೇ ಅಲ್ಲ, ಆತ್ಮಗೌರವ ಬದುಕಿಗೆ ಭದ್ರ ಅಡಿಪಾಯ ಒದಗಿಸಿದೆ ಎನ್ನಬಹುದಾಗಿದೆ.
ಪ್ರೇರಣೆ: ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ದುರ್ಬಲ ವರ್ಗದ ಜನರಿಗೆ ಜೀವನೋಪಾಯದ ಭದ್ರತೆ ನೀಡುವ ಮಹತ್ವದ ಯೋಜನೆಯಾಗಿದೆ. ವಿಶ್ವನಾಥ ಬಡಿಗೇರ ಯೋಜನೆ ಸದುಪಯೋಗ ಪಡೆದು ಕುಟುಂಬಕ್ಕೆ ಆಸರೆಯಾಗಿರುವುದು ಸಂತಸದ ಸಂಗತಿಯಾಗಿದ್ದು, ಉಳಿದ ಫಲಾನುಭವಿಗಳಿಗೂ ಪ್ರೇರಣೆಯಾಗಿದ್ದಾರೆ ಎಂದು ಕುಷ್ಟಗಿ ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಹೇಳಿದರು.