ಕನ್ನಡಪ್ರಭ ವಾರ್ತೆ ಮಂಡ್ಯಆಧುನಿಕ ಯುಗದಲ್ಲಿ ಜಾನಪದ ಸಂಸ್ಕೃತಿ, ಸೊಗಡು ಎಲ್ಲವೂ ಕಣ್ಮರೆಯಾಗುತ್ತಿದೆ. ಈ ನೆಲದ ಸಂಸ್ಕೃತಿಯನ್ನು ಉಳಿಸಬೇಕಾದ ಯುವಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಗೆ ಒಳಗಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ವಿಷಾದಿಸಿದರು.
ನಗರದಲ್ಲಿರುವ ಸೇವಾ ಕಿರಣ ವೃದ್ಧಾಶ್ರಮದಲ್ಲಿ ನಂದಿನಿ ಸೇವಾಸಮಾಜ ಟ್ರಸ್ಟ್ ಗುತ್ತಲು ಮಂಡ್ಯ (ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆ) ಆಯೋಜಿಸಿದ್ದ ಜಾನಪದ ಸಂಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಯುವಜನಾಂಗಕ್ಕೆ ಜಾನಪದದ ಮಹತ್ವ ಗೊತ್ತಿಲ್ಲ. ಸಂಸ್ಕೃತಿಯ ಅರಿವಿಲ್ಲ. ಅದನ್ನು ಓದಿ ತಿಳಿದುಕೊಳ್ಳುವ ಆಸಕ್ತಿಯನ್ನೂ ತೋರಿಸುತ್ತಿಲ್ಲ. ಜಾನಪದ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವವರೂ ಇಲ್ಲದಿರುವುದು ದೊಡ್ಡ ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಜಾನಪದದ ಪ್ರತೀಕದಂತಿದ್ದ ರಾಗಿಬೀಸುವುದು, ಭತ್ತ ಕುಟ್ಟುವುದು, ಸೋಬಾನೆ ಪದಗಳು, ಸುಗ್ಗಿ ಹಾಡುಗಳು, ಅಡುಗೆ-ಉಡುಗೆ ತೊಡುಗೆಗಳನ್ನು ಇಂದಿನ ನಾಗರಿಕತೆಯ ಭರಾಟೆಯಲ್ಲಿ ಕಾಣಲಾಗುತ್ತಿಲ್ಲ. ಬದುಕಿನ ಸಂಸ್ಕಾರ, ಜೀವನಪದ್ದತಿಯ ಅಸ್ಮಿತೆ ಇಲ್ಲವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಪ್ರಸ್ತುತ ದಿನಗಳಲ್ಲಿ ಹೊಸ ಜಾನಪದ ಹಾಡುಗಳು ಸೃಷ್ಟಿಯಾಗುತ್ತಿಲ್ಲ. ಹೊಸದಾಗಿ ಜಾನಪದ ಹಾಡುಗಳನ್ನು ಕಟ್ಟುವವರೂ ಇಲ್ಲದಂತಾಗಿದ್ದಾರೆ. ಅತಿ ಹೆಚ್ಚು ಜನರು ಹಾಡುಗಾರಿಕೆಯಲ್ಲಿದ್ದರೂ ಜಾನಪದ ಕ್ಷೇತ್ರದಲ್ಲಿ ಸ್ಪರ್ಧಾಳುಗಳು ಕಡಿಮೆ ಇದ್ದಾರೆ, ಹಾಡುಗಾರಿಕೆಯನ್ನು ಮೂಲಧಾಟಿಯಲ್ಲಿ ಹಾಡುವ ಕಲೆಗಾರಿಕೆ, ಕೌಶಲಜ್ಞಾನ ಹೆಚ್ಚಿಸಿಕೊಳ್ಳುವಂತೆ ಎಂದು ಸಲಹೆ ನೀಡಿದರು.
ಜಾನಪದ ಸಂಸ್ಕೃತಿಯನ್ನು ಉಳಿಸದಿದ್ದರೆ ಜಾನಪದ ಸೊಗಡು, ವೈಭವ ನಮ್ಮ ಮುಂದಿನ ಪೀಳಿಗೆಗೆ ಇಲ್ಲದಂತಾಗುತ್ತದೆ. ಅದನ್ನು ಉಳಿಸಿ ಬೆಳೆಸುವುದು ಇಂದಿನವರ ಪ್ರಮುಖ ಕರ್ತವ್ಯವಾಗಿದೆ ಎಂದರು.ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಜಿ ವಿ ನಾಗರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಚುಟುಕು ಸಾಹಿತಿಗಳನ್ನು ಒಂದೆಡೆ ಕಲೆಹಾಕಿ ಚರ್ಚಿಸಿ, ಚುಟುಕು ಸಾಹಿತ್ಯ ಸಮ್ಮೇಳವನ್ನು ಆಯೋಜಿಸುವುದು ಅಗತ್ಯವಿದೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹೊಸ ತಲೆಮಾರುಗಳನ್ನು ಬೆಳೆಸಬೇಕಿದೆ ಎಂದು ನುಡಿದರು.
ವೇದಿಕೆಯಲ್ಲಿ ಕೈಲಾಸಮೂರ್ತಿ, ಶ್ರೀನಿವಾಸ್ ನಾಗಮಂಗಲ ಮತ್ತು ತಂಡ, ಗಾಯಕಿ ಭವ್ಯ ಅವರಿಂದ ಜಾನಪದ ಗೀತೆಗಳು ಸಭಿಕರನ್ನು ರಂಜಿಸಿದವು.ಕಾರ್ಯಕ್ರಮದಲ್ಲಿ ಕಸಾಪ ನಗರ ಘಟಕ ಅಧ್ಯಕ್ಷ ಸುಜಾತಕೃಷ್ಣ, ಸಾಹಿತಿ ಕಟ್ಟೆ ಎಂಎಸ್ ಕೃಷ್ಣಸ್ವಾಮಿ, ಹಿರಿಯ ಕಲಾವಿದ ಎಚ್ ಸಿ ಮಹೇಶ್‌ಕುಮಾರ್, ಗಾಯಕಿ ಚಂದ್ರಕಲಾ, ನಂದಿನಿ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ಕೆ.ಶೈಲಜಾ, ಸಂಸ್ಥಾಪಕ ಕಾರ್ಯದರ್ಶಿ ನಂದಿನಿ, ಪದಾಧಿಕಾರಿಗಳಾದ ಎಚ್ ನೇತ್ರಾವತಿ, ಆಶಾ ಸೇರಿದಂತೆ ಹಲವರು ಹಾಜರಿದ್ದರು.