ಕಣ್ಮರೆಯಾಗುತ್ತಿರುವ ಕಾಡು ಜಾತಿಯ ಹಣ್ಣುಗಳು

KannadaprabhaNewsNetwork |  
Published : Aug 04, 2025, 12:15 AM IST
ಚಿತ್ರ: ೩ಎಸ್.ಎನ್.ಡಿ.೦೧- ಸಂಡೂರು ತಾಲೂಕಿನ ರಾಘವಾಪುರ ಅರಣ್ಯದಲ್ಲಿ ಕಂಡ ಕಾರೆ ಹಣ್ಣು.೩ಎಸ್.ಎನ್.ಡಿ.೦೨-ಸಂಡೂರು ತಾಲೂಕಿನ ರಾಘವಾಪುರ ಅರಣ್ಯದಲ್ಲಿ ಕಂಡು ಬಂದ ನಗರೆ ಹಣ್ಣು.೩ಎಸ್.ಎನ್.ಡಿ.೦೩-ಸಂಡೂರು ತಾಲೂಕಿನ ತಾರಾನಗರದ ಬಳಿಯ ಕಾಡಿನಲ್ಲಿ ಕಂಡುಬಂದ ಲೇಬೆ ಹಣ್ಣಿನ ಕಾಯಿಗಳು.೩ಎಸ್.ಎನ್.ಡಿ.೦೪-ಸಂಡೂರು ತಾಲೂಕಿನ ಯಶವಂತನಗರ ಅರಣ್ಯ ಪ್ರದೇಶದಲ್ಲಿ ಕಂಡುಬಂದ ಬಿಕ್ಕೆ ಹಣ್ಣಿನ ಕಾಯಿಗಳು.೩ಎಸ್.ಎನ್.ಡಿ.೦೫- ಸಂಡೂರು ತಾಲೂಕಿನ ಬಂಡ್ರಿ ಅರಣ್ಯ ಪ್ರದೇಶದಲ್ಲಿ ಕಂಡು ಬಂದ ಜೋಳದ ಹಣ್ಣುಗಳು. | Kannada Prabha

ಸಾರಾಂಶ

ಮಾವು, ಸೇಬು, ಹಲಸು, ದಾಳಿಂಬೆ, ಬಾಳೆ ಮುಂತಾದ ಹಣ್ಣುಗಳ ಭರಾಟೆಯಲ್ಲಿ ಕಾಡು ಜಾತಿಯ ಹಣ್ಣುಗಳಾದ ಕಾರೆ, ಬಿಕ್ಕೆ, ಕವಳೆ, ಜಾನಿ, ಲೇಬೆ, ಚಳ್ಳೆ, ನಗರೆ ಮುಂತಾದ ಹಣ್ಣುಗಳು ಜನ ಮಾನಸದಿಂದ ದೂರವಾಗುತ್ತಿವೆ.

ಇಂದಿನ, ಮುಂದಿನ ತಲೆಮಾರುಗಳಿಗೂ ಪರಿಚಯಿಸಲು ಗಿಡಮರ ಹೆಚ್ಚಿಸುವ ಅಗತ್ಯವಿದೆವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ಮಾವು, ಸೇಬು, ಹಲಸು, ದಾಳಿಂಬೆ, ಬಾಳೆ ಮುಂತಾದ ಹಣ್ಣುಗಳ ಭರಾಟೆಯಲ್ಲಿ ಕಾಡು ಜಾತಿಯ ಹಣ್ಣುಗಳಾದ ಕಾರೆ, ಬಿಕ್ಕೆ, ಕವಳೆ, ಜಾನಿ, ಲೇಬೆ, ಚಳ್ಳೆ, ನಗರೆ ಮುಂತಾದ ಹಣ್ಣುಗಳು ಜನ ಮಾನಸದಿಂದ ದೂರವಾಗುತ್ತಿವೆ.ಕಾಡು ಹಣ್ಣುಗಳನ್ನು ಕೆಲವರು ಬುಟ್ಟಿಯಲ್ಲಿ ಸಂಗ್ರಹಿಸಿ ತಂದು ಶಾಲೆಗಳ ಬಳಿಯಲ್ಲಿ ಕುಳಿತು, ಔಷಧ ಸೀಸೆಯ ಮುಚ್ಚಳ, ಚಟಾಕು, ಪಾವು ಮುಂತಾದ ಮಾಪಕಗಳನ್ನು ಬಳಸಿ ಮಾರಾಟ ಮಾಡುತ್ತಿದ್ದ ದೃಶ್ಯ ಈಗ ಹೆಚ್ಚಾಗಿ ಕಾಣಸಿಗುವುದಿಲ್ಲ. ಈಗೇನಿದ್ದರೂ ಜಂಕ್ ಫುಡ್‌ಗಳ ಜಮಾನ. ಹೀಗಾಗಿ ಕಾಡು ಹಣ್ಣುಗಳ ಜತೆಗೆ ಹಳೆಯ ಮಾಪಕಗಳು ಕಣ್ಮರೆಯಾಗಿವೆ.ಹೊಲಗಳ ಅಂಚಿನಲ್ಲಿ, ಊರಿಗೆ ಹೊಂದಿಕೊಂಡಿರುವ ಗುಡ್ಡ ಬೆಟ್ಟಗಳಲ್ಲಿ ಕಾಣಸಿಗುತ್ತಿದ್ದ ಕಾರೆ ಗಿಡಗಳಲ್ಲಿನ ಮುಳ್ಳನ್ನು ಚುಚ್ಚಿಸಿಕೊಳ್ಳುತ್ತಾ, ಗಿಡದಡಿಯಲ್ಲಿ ಹಳದಿ ಬಣ್ಣಕ್ಕೆ ತಿರುಗಿರುವ ಕಾಯಿಗಳನ್ನು ಕಿತ್ತು, ಕೆಲ ಸಣ್ಣ ಕಲ್ಲುಗಳ ತುಂಡುಗಳೊಂದಿಗೆ ಜೇಬಿನಲ್ಲಿ ಹಾಕಿಕೊಂಡು ಮನೆಗೆ ಬರುವ ಹೊತ್ತಿಗೆ ಹಣ್ಣಾಗಿರುತ್ತಿದ್ದವು. ಅವುಗಳನ್ನು ತಿಂದು ಬಾಯಿ ಸಿಹಿ ಮಾಡಿಕೊಳ್ಳುತ್ತಿದ್ದ ಬಾಲ್ಯದ ದಿನಗಳನ್ನು ಹಲವು ಹಿರಿಯರು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಹಿರಿಯರು ಇಂತಹ ಕಾಡು ಹಣ್ಣುಗಳ ಕುರಿತು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಸೊಗಸಾಗಿ ವಿವರಿಸುವಾಗ, ಚಿಕ್ಕವರು ಕಣ್ಣು ಹಾಗೂ ಕಿವಿಗಳನ್ನು ಅರಳಿಸಿ ಕೇಳಿಸಿಕೊಳ್ಳುವುದನ್ನು ಕಾಣಬಹುದಾಗಿದೆ.

ಸಂಡೂರು ತಾಲೂಕಿನ ಸೋಮಲಾಪುರ, ಯಶವಂತನಗರ, ಬಂಡ್ರಿ ಭಾಗದ ಅರಣ್ಯದಲ್ಲಿ, ತಾರಾನಗರದ ಬಳಿಯ ಅರಣ್ಯ ಭಾಗದಲ್ಲಿ ಕಾಡುಹಣ್ಣುಗಳಾದ ಕಾರೆ, ಬಿಕ್ಕೆ, ಲೇಬೆ, ನಗರೆ, ಚಳ್ಳೆ ಮುಂತಾದ ಹಣ್ಣುಗಳು ಈಗಲೂ ಕಾಣ ಸಿಗುತ್ತವೆ.

ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷವನ್ನು ತಪ್ಪಿಸಲು ಕಾಡನ್ನು ಸಂರಕ್ಷಿಸಬೇಕಲ್ಲದೆ, ಅಲ್ಲಿ ಹಣ್ಣಿನ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಕಾಡಿನಲ್ಲಿ ಹಣ್ಣುಗಳ ರೂಪದಲ್ಲಿ ಆಹಾರ ದೊರೆತಾಗ, ಕೋತಿ, ಕರಡಿ, ನವಿಲು ಮುಂತಾದ ಪ್ರಾಣಿ ಹಾಗೂ ಪಕ್ಷಿಗಳು ನಾಡಿಗೆ ಬರುವುದು ತಪ್ಪುತ್ತದೆ ಎಂಬ ಮಾತು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ.

ಪ್ರಕೃತಿಯಿಂದ ಪುಕ್ಕಟೆಯಾಗಿ, ಯಾವುದೇ ರಾಸಾಯನಿಕ ವಸ್ತುಗಳ ಸ್ಪರ್ಶವಿಲ್ಲದೆ ದೊರೆಯುತ್ತಿದ್ದ ಕಾಡು ಹಣ್ಣುಗಳು ಜನ ಮಾನಸದಿಂದ ದೂರವಾಗುತ್ತಿವೆ. ಇಂದಿನ ಮತ್ತು ಮುಂದಿನ ತಲೆಮಾರುಗಳಿಗೂ ಕಾಡು ಹಣ್ಣುಗಳನ್ನು ಪರಿಚಯಿಸಲು, ಅವುಗಳ ಅಸ್ತಿತ್ವ ಉಳಿಸಿ ಬೆಳೆಸಲು ಮತ್ತು ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷವನ್ನು ತಪ್ಪಿಸಲು ಕಾಡಿನಲ್ಲಿ ಕಾಡು ಜಾತಿಯ ಹಣ್ಣುಗಳ ಗಿಡಮರಗಳನ್ನು ಹೆಚ್ಚಿಸುವ ಅಗತ್ಯವಿದೆ.ಸಂಡೂರು ತಾಲೂಕಿನ ಸೋಮಲಾಪುರ, ಯಶವಂತನಗರ, ಬಂಡ್ರಿ ಮುಂತಾದ ಅರಣ್ಯ ಪ್ರದೇಶಗಳಲ್ಲಿ ಬಿಕ್ಕೆ, ಕಾರೆ, ಚಳ್ಳೆ, ನಗರೆ ಮುಂತಾದ ಕಾಡು ಹಣ್ಣುಗಳ ಗಿಡಮರಗಳು ಹೆಚ್ಚಾಗಿ ಕಾಣಸಿಗುತ್ತವೆ ಎಂದು ಚಾರಣಿಗ ಜಿ. ನಾಗೇಂದ್ರ ಕಾವೂರ ತಿಳಿಸಿದ್ದಾರೆ.

ಕಾಡಿನಲ್ಲಿ ಕಾಡು ಜಾತಿಯ ಹಣ್ಣಿನ ಗಿಡಮರ ಹೆಚ್ಚಾಗಿ ಬೆಳೆಸಿದರೆ, ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಬಹುದಾಗಿದೆ. ಹಾಗೆಯೇ ಕಾಡು ಜಾತಿಯ ಹಣ್ಣುಗಳ ಅಸ್ತಿತ್ವವನ್ನು ಉಳಿಸಲು ಹಾಗೂ ಮುಂದಿನ ತಲೆಮಾರಿನವರೂ ಅವುಗಳನ್ನು ಕಾಣಲು, ಆಸ್ವಾದಿಸಲು ಅನುಕೂಲವಾಗಲಿದೆ ಎಂದು ಪರಿಸರವಾದಿ ಜಿ.ಕೆ. ನಾಗರಾಜ ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ