ಲಕ್ಷ್ಮೇಶ್ವರ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಲು ಬಯಸಿದ ನೂರಾರು ಮಹಿಳೆಯರು ಬುಧವಾರ ಪಟ್ಟಣದ ಪುರಸಭೆಗೆ ಆಗಮಿಸಿ ನೋಂದಣಿ ಮಾಡಿಕೊಳ್ಳುವಂತೆ ಪುರಸಭೆಯ ಸಿಬ್ಬಂದಿಗೆ ಆಗ್ರಹಿಸಿ ವಾಪಸ್ ಹೋದ ಘಟನೆ ನಡೆಯಿತು. ಪಟ್ಟಣದ ಪುರಸಭೆಗೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಲು 3 ದಿನಗಳ ಕಾಲ ವಿಶೇಷ ಶಿಬಿರ ಹಮ್ಮಿಕೊಂಡಿರುವ ಕುರಿತು ಪಟ್ಟಣದ ವಿವಿಧ ವಾರ್ಡ್‌ಗಳ ಅಂಗನವಾಡಿ ಕಾರ್ಯಕರ್ತರು ತಿಳಿಸಿದ್ದರಿಂದ ನೂರಾರು ಸಂಖ್ಯೆಯ ಮಹಿಳೆಯರು ಪುರಸಭೆಗೆ ಆಗಮಿಸಿದ್ದರು. ಆದರೆ ಅಲ್ಲಿ ನೋಂದಣಿಗೆ ವ್ಯವಸ್ಥೆ ಇರಲಿಲ್ಲ. ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಸ್ಪಷ್ಟನೆ ನೀಡಿ, ಗೃಹಲಕ್ಷ್ಮೀ ಯೋಜನೆಯ ತಿದ್ದುಪಡಿ ಹಾಗೂ ನೋಂದಣಿ ಮಾಡಿಸಿಕೊಳ್ಳುವ ಕುರಿತಾಗಿ ಸರ್ಕಾರದಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ ನೋಂದಣಿ ಮಾಡಿಕೊಳ್ಳುವ ಕಾರ್ಯ ನಡೆಸುತ್ತಿಲ್ಲ. ಮಹಿಳೆಯರಿಗೆ ಅಂಗನಾಡಿ ಕಾರ್ಯಕರ್ತರು ತಪ್ಪು ಮಾಹಿತಿ ನೀಡಿದ್ದಾರೆ. ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಎದುರಿಸುತ್ತಿರುವ ತೊಂದರೆ ತಪ್ಪಿಸಲು ವಿಶೇಷ ಶಿಬಿರ ಹಮ್ಮಿಕೊಂಡಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ಆದೇಶವನ್ನು ಸರ್ಕಾರ ನೀಡಿಲ್ಲ. ಇದು ಅಂಗನವಾಡಿ ಕಾರ್ಯಕರ್ತರಲ್ಲಿ ಉಂಟಾಗಿರುವ ತಪ್ಪು ಕಲ್ಪನೆಯಿಂದಾಗಿದೆ ಎಂದು ಹೇಳಿದರು.