ತುಂಗಭದ್ರಾ ಜಲಾಶಯದಲ್ಲಿ ವೆಲ್ಡಿಂಗ್ ತಂದ ಆಪತ್ತು

KannadaprabhaNewsNetwork | Published : Aug 12, 2024 1:02 AM

ಸಾರಾಂಶ

ಜಲಾಶಯದ ಗೇಟ್‌ಗಳು ಸರಿಯಾಗಿವೆ ಎಂದು ಮಂಡಳಿಯ ಎಲ್ಲ ವಿಭಾಗಗಳು ವರದಿ ನೀಡಿವೆ.‌

ಹೊಸಪೇಟೆ: ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳಿಗೆ ಸಾಮಗ್ರಿಗಳನ್ನು ಪ್ರತಿಷ್ಠಿತ ಕಂಪನಿಯೊಂದು ಸರಬರಾಜು ಮಾಡುತ್ತಿದೆ. ಆದರೆ, ಸ್ಥಳೀಯ ಮಟ್ಟದಲ್ಲೇ ವೆಲ್ಡಿಂಗ್ ಮಾಡಿಸಲಾಗುತ್ತಿದ್ದು, ಈ ವೆಲ್ಡಿಂಗ್ ಲೋಪದಿಂದ ಈ ಸಮಸ್ಯೆ ಉಂಟಾಗಿದೆ ಎಂದು ಪ್ರಾಥಮಿಕ ಪರಿಶೀಲನೆ ವೇಳೆ ಕಂಡು ಬಂದಿದೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಓ. ರಾಮಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ಜಲಾಶಯದ ಗೇಟ್‌ಗಳು ಸರಿಯಾಗಿವೆ ಎಂದು ಮಂಡಳಿಯ ಎಲ್ಲ ವಿಭಾಗಗಳು ವರದಿ ನೀಡಿವೆ.‌ ಪ್ರತಿ ವರ್ಷ ಮಾರ್ಚ್‌ನಲ್ಲೇ ಗೇಟ್‌ಗಳನ್ನು ಪರಿಶೀಲಿಸಲಾಗುತ್ತದೆ. ಈ ವರ್ಷವೂ ಪರಿಶೀಲನೆ ನಡೆಸಿ ವರದಿ ಪಡೆಯಲಾಗಿದೆ. ಹೀಗಿದ್ದರೂ ಡ್ಯಾಂನ ಗೇಟ್ ನಂ.19ರ ಚೈನ್ ಲಿಂಕ್ ಕಟ್ ಆಗಿರುವುದು ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ. ಇನ್ನು 70 ವರ್ಷದ ವರೆಗೆ ಜಲಾಶಯಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸಮೀಕ್ಷಾ ಸಂಸ್ಥೆ ಕೂಡ ವರದಿ ನೀಡಿದೆ. ಹೀಗಿದ್ದರೂ ಈಗ ಜಲಾಶಯದ ಗೇಟ್ ನಂಬರ್ 19 ಕಳಚಿದೆ.

ವೆಲ್ಡಿಂಗ್‌ ಬಿಟ್ಟಿದ್ದೇ ಸಮಸ್ಯೆ:

ಅಣೆಕಟ್ಟೆಯ 19ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ನ ಚೈನ್‌ಲಿಂಕ್ ವೆಲ್ಡಿಂಗ್ ಬಿಟ್ಟಿದ್ದೇ ಗೇಟ್ ಸಂಪೂರ್ಣ ಕುಸಿಯಲು ಕಾರಣವಾಗಿದೆ. ಅಣೆಕಟ್ಟೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ದುರಂತ ಸಂಭವಿಸಿದೆ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆ‌ರ್.ಕೆ. ರೆಡ್ಡಿ ಹೇಳಿದರು.

ಟಿ.ಬಿ. ಡ್ಯಾಂ ಅತಿಥಿಗೃಹ ವೈಕುಂಠದಲ್ಲಿ ಭಾನುವಾರ ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದಲಿ ಗೇಟ್ ಅಳವಡಿಸಲು ತಕ್ಷಣದಿಂದಲೇ ಸಿದ್ಧತೆ ನಡೆದಿದೆ. ಮಳೆ ಕಡಿಮೆಯಾಗಿರುವ ಕಾರಣ ಮೂರ್ನಾಲ್ಕು ದಿನಗಳಲ್ಲಿ ನೀರು ಖಾಲಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದರು.

ಸಾಮಾನ್ಯವಾಗಿ ಪ್ರತಿ ವರ್ಷವೂ ಗೇಟ್‌ಗಳ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸುತ್ತಲೇ ಇರುತ್ತೇವೆ. ಈ ಬಾರಿ ಸಹ ಅಂತಹ ಎಲ್ಲ ಪರೀಕ್ಷೆಗಳೂ ನಡೆದಿವೆ. ಆದರೆ 19ನೇ ಗೇಟ್‌ನಲ್ಲಿ ವೆಲ್ಡಿಂಗ್‌ ಬಿಟ್ಟ ಕಾರಣ ಚೈನ್‌ಲಿಂಕ್‌ ತುಂಡಾಯಿತು. 70 ವರ್ಷಗಳ ಹಿಂದೆ ಅಳವಡಿಸಿದ ಚೈನ್‌ ಲಿಂಕ್ ಇದು. ಹೀಗಿದ್ದರೂ ಈ ವೆಲ್ಡಿಂಗ್ ಬಿಡಲು ಕಾರಣ ಏನು ಎಂಬುದರ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಸಂಪೂರ್ಣ ಹೊಸ ಕ್ರಸ್ಟ್‌ಗೇಟ್ ಅನ್ನೇ ಅಳವಡಿಸಬೇಕಿದೆ. 60 ಅಡಿ ಎತ್ತರ ಮತ್ತು 20 ಅಡಿ ಅಗಲದ ಗೇಟ್ ಇದಾಗಿರುತ್ತದೆ. ತಲಾ 12 ಅಡಿ ಅಗಲದ 5 ಬೃಹತ್ ಕಬ್ಬಿಣದ ಹಲಗೆಗಳನ್ನು ಜೋಡಿಸಿ ಈ ಗೇಟ್ ಸಿದ್ಧಪಡಿಸಲಾಗುತ್ತದೆ. 48 ಟನ್‌ ತೂಕದ ಗೇಟ್‌ ಇದಾಗಿದೆ. ಸ್ಥಳೀಯವಾಗಿಯೇ ಅದನ್ನು ನಿರ್ಮಿಸಲಾಗುತ್ತಿದೆ. ನೀರು 20 ಅಡಿಯಷ್ಟು ಇಳಿಕೆಯಾದ ತಕ್ಷಣ ಗೇಟ್ ಅಳವಡಿಸಲಾಗುವುದು ಎಂದು ರೆಡ್ಡಿ ಮಾಹಿತಿ ನೀಡಿದರು.

Share this article