ಹೋರಾಟದ ಕಾವಿಗೆ ಮಣಿದ ಬ್ಯಾಂಕ್‌ : ಭೂಮಿ ವಾಪಸ್‌

KannadaprabhaNewsNetwork | Published : Aug 12, 2024 1:02 AM

ಸಾರಾಂಶ

ಹೋರಾಟದ ಕಾವಿಗೆ ಮಣಿದ ಬ್ಯಾಂಕ್‌ : ಭೂಮಿ ವಾಪಸ್‌

ಕನ್ನಡಪ್ರಭವಾರ್ತೆ ತುರುವೇಕೆರೆ

ಆನ್ ಲೈನ್ ಟೆಂಡರ್ ಮೂಲಕ ರೈತರ ಜಮೀನು ಹರಾಜು ಹಾಕಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಕರ್ನಾ‍ಟಕ ಬ್ಯಾಂಕ್ ಮುಂಭಾಗ ನಡೆಯಲಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ತಾಲೂಕು ರೈತ ಸಂಘದ ಅದ್ಯಕ್ಷ ಶ್ರೀನಿವಾಸ್ ಗೌಡ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನ ತಾಳೆಕೆರೆ ಗ್ರಾಮದ ನಾಗರಾಜು, ಕೃಷ್ಣಪ್ಪ ಎಂಬುವವರ ಜಮೀನನ್ನು ಕರ್ಣಾಟಕ ಬ್ಯಾಂಕ್ ನವರು ಹರಾಜು ಮಾಡಿದ್ದರು. ಹರಾಜು ರದ್ದುಗೊಳಿಸಿ ರೈತನ ಜಮೀನನ್ನು ಮತ್ತೆ ರೈತರಿಗೆ ನೀಡಲು ಒಪ್ಪಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ಸು ಪಡೆಯಲಾಗಿದೆ. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಬ್ಯಾಂಕಿನ ಜಿ.ಎಂ.ಕೆ.ಸುಬ್ರಾಮ್ ಮತ್ತು ಎಜಿಎಂ ಮಲ್ಲನಗೌಡ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಮ್ಮುಖದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ, ರೈತರ ಭೂಮಿಯನ್ನ ಹರಾಜು ಹಾಕಿರುವುದು ತಪ್ಪಾಗಿದೆ. ಹಾಗಾಗಿ ಮುಂದಿನ ಎರಡು ತಿಂಗಳ ಒಳಗೆ ರೈತರ ಜಮೀನು ಹರಾಜನ್ನು ರದ್ದುಪಡಿಸಿ, ರೈತರಿಗೆ ವಾಪಸ್ ನೀಡಲಾಗುವುದು ಎಂದು ಭರವಸೆ ನೀಡಿದರು. ಇದು ರೈತ ಸಂಘದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು. ರೈತ ಸಂಘದ ಗೌರವಾದ್ಯಕ್ಷ ಅಸ್ಲಾಂಪಾಷ ಮಾತನಾಡಿ ರೈತ ಸಂಘ ನಿರಂತರವಾಗಿ ರೈತ ಪರವಾಗಿ ಹೋರಾಟಗಳನ್ನು ಮಾಡುತ್ತಿದೆ. ಬ್ಯಾಂಕ್ ಗಳು ಸಾಲದ ನೆಪದಲ್ಲಿ ರೈತರಿಗೆ ನೋಟಿಸ್ ನೀಡಿ ಕಿರುಕುಳ, ಹಿಂಸೆ ನೀಡುವುದನ್ನು ಖಂಡಿಸಿ ಹೋರಾಟ ಮಾಡಲಾಗುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು. ತಾಳಕೆರೆಯ ರೈತರ ಪ್ರಕರಣದಲ್ಲಿ ಒಟಿಎಸ್‍ ಮಾಡಲು ಬ್ಯಾಂಕ್ ಅಧಿಕಾರಿಗಳು ಸ್ಪಂದಿಸಿದ್ದಾರೆ. ರೈತ ನಾಗರಾಜು, ಕೃಷ್ಣಪ್ಪ ಅವರಿಗೆ ಭೂಮಿ ಹಿಂತಿರುಗಿಸಿದ ನಂತರ, ಸಾಲದ ಅಸಲನ್ನು ಕಟ್ಟಿಸಲಾಗುವುದು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎಲ್ಲ ಬ್ಯಾಂಕ್ ಗಳು ರೈತರ ಸಾಲಕ್ಕೆ ಓಟಿಎಸ್ ಮಾಡುವ ಮೂಲಕ ರೈತರ ಸಾಲಗಳನ್ನು ಕಟ್ಟಿಸಿಕೊಳ್ಳಬೇಕು ಎಂದು ಅಸ್ಲಾಂ ಪಾಷಾ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಮುಖಂಡರಾದ ರಹಮತ್‍, ಶ್ರೀನಿವಾಸ್, ಪುರುಷೋತ್ತಮ್, ನಾಗರಾಜು, ಡೊಂಕಿಹಳ್ಳಿರಾಮಯ್ಯ, ಕಾವಲು ಸಮಿತಿ ವೆಂಕಟೇಶ್ ಸೇರಿದಂತೆ ಇತರರು ಇದ್ದರು.

Share this article