ಉದ್ರಿಕ್ತ ಗುಂಪಿದ್ದಾಗ ಅನಾಹುತ ಸಹಜ: ಶಾಸಕ ಶಿವಗಂಗಾ ಬಸವರಾಜ ಹೇಳಿಕೆ

KannadaprabhaNewsNetwork | Published : May 26, 2024 1:40 AM

ಸಾರಾಂಶ

ಚನ್ನಗಿರಿ ಟಿಪ್ಪು ನಗರದ ಆದಿಲ್ ಸಾವು ಪ್ರಕರಣ ಲಾಕಪ್ ಡೆತ್‌ ಎಂಬ ಆರೋಪವಿದೆ. ಮತ್ತೊಂದು ಕಡೆ ಕಡಿಮೆ ರಕ್ತದೊತ್ತಡ (ಲೋ ಬಿ.ಪಿ) ಯಿಂದಾಗಿ ಸಾವನ್ನಪ್ಪಿದ್ದಾರೆ ಎಂಬ ಮಾತೂ ಇದೆ. ಶವದ ಮರಣೋತ್ತರ ಪರೀಕ್ಷೆ ವರದಿ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಶಾಸಕ ಶಿವಗಂಗಾ ವಿ.ಬಸವರಾಜ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಮರಣೋತ್ತರ ಪರೀಕ್ಷೆ ವರದಿ ಬಂದರೆ ಆದಿಲ್‌ ಸಾವಿನ ಕಾರಣ ಸ್ಪಷ್ಟ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಚನ್ನಗಿರಿ ಟಿಪ್ಪು ನಗರದ ಆದಿಲ್ ಸಾವು ಪ್ರಕರಣ ಲಾಕಪ್ ಡೆತ್‌ ಎಂಬ ಆರೋಪವಿದೆ. ಮತ್ತೊಂದು ಕಡೆ ಕಡಿಮೆ ರಕ್ತದೊತ್ತಡ (ಲೋ ಬಿ.ಪಿ) ಯಿಂದಾಗಿ ಸಾವನ್ನಪ್ಪಿದ್ದಾರೆ ಎಂಬ ಮಾತೂ ಇದೆ. ಶವದ ಮರಣೋತ್ತರ ಪರೀಕ್ಷೆ ವರದಿ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಶಾಸಕ ಶಿವಗಂಗಾ ವಿ.ಬಸವರಾಜ ಹೇಳಿದರು.

ಮೃತ ಆದಿಲ್ ನಿವಾಸಕ್ಕೆ ಶನಿವಾರ ಭೇಟಿ ನೀಡಿ, ಪಾರ್ಥಿವ ಶರೀರದ ದರ್ಶನ ಮಾಡಿದ ನಂತರ ಮೃತನ ತಂದೆ ಖಲೀಂವುಲ್ಲಾ ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನಿಮ್ಮೊಂದಿಗೆ ಇದ್ದೇನೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ಆಗುತ್ತದೆ ಎಂದರು.

ಕಾನೂನು, ಸುವ್ಯವಸ್ಥೆ ಉತ್ತಮವಾಗಿಯೇ ಇದೆ:

ಆದಿಲ್ ತಂದೆ ಖಲೀಂವುಲ್ಲಾ ಮಗನ ಸಾವಿನ ಶಾಕ್‌ನಿಂದಾಗಿ ಏನೇನೋ ಮಾತನಾಡಿದ್ದಾರೆ. ಪೊಲೀಸರು ಕರೆದೊಯ್ದಾಗ ಆದಿಲ್‌ ಸಾವು ಸಂಭವಿಸಿದ್ದರಿಂದ ಉದ್ರಿಕ್ತ ಜನರು ಠಾಣೆ ಮುಂಭಾಗದಲ್ಲಿ ಪ್ರತಿಭಟಿಸಿದ್ದಾರೆ. ಆದರೆ, ಗಲಾಟೆಯಲ್ಲಿ ಯಾವುದೇ ಸಾವು, ನೋವಾಗಿಲ್ಲ. ಪ್ರತಿಭಟನೆಗೆ ಬೇರೆ ಕಡೆಯಿಂದ ಯಾರೂ ಬಂದಿಲ್ಲ. ಗುಂಪಿನಲ್ಲಿ ಯಾರೋ ಒಂದಿಬ್ಬರು ಹಾಗೆ ಮಾಡಿದ್ದಾರೆ. ಜನರು ಉದ್ರಿಕ್ತರಾದಾಗ ಇಂತಹ ಅನಾಹುತಗಳು ಸಹಜ ಎಂದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿಯೇ ಇದೆ ಎಂದರು.

ಕೆಜೆ ಹಳ್ಳಿ, ಡಿಜೆ ಹಲ್ಳಿಯೆಂದು ಗೃಹ ಸಚಿವರು ಹೇಳಿದ್ದಂತೆ ಅಂತಹದ್ದೇನೂ ಆಗಿಲ್ಲ. ಗೃಹ ಮಂತ್ರಿಗಳ ಹೇಳಿಕೆಯನ್ನು ನಾನು ನೋಡಿಲ್ಲ. ಚನ್ನಗಿರಿ ಡಿವೈಎಸ್‌ಪಿ, ಸಿಪಿಐ ಅವರನ್ನು ಮುಖ್ಯಮಂತ್ರಿ ಅವರು ಅಮಾನತುಗೊಳಿಸಿದ ಬಗ್ಗೆ ಮಾಹಿತಿ ಇದೆ. ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಶಿವಗಂಗಾ ಬಸವರಾಜ ಹೇಳಿದರು.

- - - -ಫೋಟೋಇದೆ: (-ಶಿವಗಂಗಾ ಬಸವರಾಜ)

Share this article