ಕನ್ನಡಪ್ರಭ ವಾರ್ತೆ ಚಾಮರಾಜನಗರಅಂಗವಿಕಲರಿಗೆ ವಿಪತ್ತು ನಿರ್ವಹಣೆ ಅರಿವು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮೊಬಿಲಿಟಿ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲೆಯ ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರಿಗೆ ವಿಪತ್ತು ನಿರ್ವಹಣೆಯಲ್ಲಿ ವಿಕಲಚೇತನರ ಒಳಗೊಳ್ಳುವಿಕೆ ಮತ್ತು ಮನೋ ಸಾಮಾಜಿಕ ಆರೈಕೆ ಕುರಿತು ಕಾರ್ಯಾಗಾರ ಹಾಗೂ ಮತದಾನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿಪತ್ತಿನ ಸಂದರ್ಭದಲ್ಲಿ ಅಂಗವಿಕಲರಿಗೆ ಸಹಕಾರ ಕೊಡಬೇಕು. ಅಲ್ಲದೇ ಸಾಮಾನ್ಯ ಜನರಲ್ಲೂ ವಿಪತ್ತು ನಿರ್ವಹಣೆ ಅರಿವು ಇರಬೇಕು. ಅಂಗವಿಕಲರು ಸ್ವಶಕ್ತಿಯಿಂದ ವಿಪತ್ತು ಎದುರಿಸಲು ಸಿದ್ಧರಾಗಬೇಕು. ಅಲ್ಲದೇ ಇಂತಹ ಸಂದರ್ಭದಲ್ಲಿ ಮಾನಸಿಕ ಸಿದ್ಧತೆಯೂ ಅಗತ್ಯ ಎಂದು ತಿಳಿಸಿದರು.ಕರ್ನಾಟಕದಲ್ಲಿ ಮಾತ್ರ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ. ಸರ್ಕಾರೇತರ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ವಿಪತ್ತು ನಿರ್ವಹಣೆ ಕುರಿತು ಸರ್ಕಾರೇತರ ಸಂಸ್ಥೆಗಳು ವಿಕಲಚೇತನರು, ಜನರಲ್ಲಿ ಅರಿವು ಮೂಡಿಸಿ ಮಾನಸಿಕವಾಗಿ ತಯಾರು ಮಾಡಬೇಕು ಎಂದು ಸಲಹೆ ನೀಡಿದರು.ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಂವಿಧಾನದ ಮೂಲಕ ಇಲ್ಲಿನ ಪ್ರಜೆಗಳಿಗೆ ಮತದಾನದ ಹಕ್ಕು ನೀಡಲಾಗಿದೆ. ಅಂಗವಿಕಲರು ಮತ ಚಲಾಯಿಸಬೇಕು. ವಿಶೇಷಚೇತನರಿಗೆ ನೀಡಲಾಗಿರುವ ಶೇ.5ರಷ್ಟು ಮೀಸಲಾತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ ಮಾತನಾಡಿ, 2019 ರಲ್ಲಿ ಕೊಡಗಿನಲ್ಲಿ ಸಂಭವಿಸಿದ ವಿಪತ್ತಿನಿಂದಾಗಿ ಬಹಳಷ್ಟು ಜೀವ, ಆಸ್ತಿ ಪಾಸ್ತಿ ಹಾನಿಯಾಯಿತು. ಈ ಸಂದರ್ಭದಲ್ಲಿ ಸಾಕಷ್ಟು ಸರ್ಕಾರೇತರ ಸಂಸ್ಥೆಗಳು ಧಾವಿಸಿ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಹಸ್ತ ಚಾಚಿದವು. ಪ್ರಕೃತಿ ನಮ್ಮ ಕೈಯಲ್ಲಿಲ್ಲ. ನಾವೆಲ್ಲ ಪ್ರಕೃತಿಯ ಕೈಗೊಂಬೆ. ಆದ್ದರಿಂದ ವಿಪತ್ತು ನಿರ್ವಹಣೆ ಅರಿವು ಹೊಂದುವುದು ಅಗತ್ಯ ಎಂದರು.ಅಂಗವಿಕಲರಿಗೆ ಗ್ರಾಮಪಂಚಾಯಿತಿಯಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲು ಕ್ರಮವಹಿಸಲಾಗಿದೆ. ಮತದಾರರ ಗುರುತಿನ ಚೀಟಿ ಹೊಂದಿಲ್ಲದ ಅಂಗವಿಕಲರು ಗುರುತಿನ ಚೀಟಿ ಪಡೆದುಕೊಂಡು ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಮ್ಮದ್ ಮುಕ್ತಾರ್, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್, ಮೊಬಿಲಿಟಿ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಆಲ್ಬಿನಾ ಶಂಕರ್, ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಆನಂದ್, ಬೆಂಗಳೂರಿನ ನಿಮಾನ್ಸ್ ನ ಡಾ. ಜಯಕುಮಾರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.