ಕೊಪ್ಪಳ: ಸಂಭವನೀಯ ಅತಿವೃಷ್ಠಿ, ಅನಾವೃಷ್ಠಿ, ಪ್ರವಾಹ, ನೈಸರ್ಗಿಕ ವಿಪತ್ತು ಸಂದರ್ಭಗಳಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಹೇಳಿದರು.
ಯಾವುದೇ ವಿಕೋಪ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಿದರೆ ಸಾವಿರಾರು ಜನರ ಜೀವ ಉಳಿಯುತ್ತವೆ. ಹಾಗಾಗಿ ವಿಪತ್ತು ಸಂದರ್ಭದಲ್ಲಿ ಸ್ಥಳೀಯ ಆಡಳಿತ, ವಿವಿಧ ಇಲಾಖೆ ಹಾಗೂ ಸಾರ್ವಜನಿಕರು ತಮ್ಮ ಪಾತ್ರ ಅರ್ಥೈಸಿಕೊಳ್ಳುವುದೊಂದಿಗೆ ವಿಪತ್ತು ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕವಾಗಿದೆ ಮತ್ತು ಇದು ಎಲ್ಲರ ಆದ್ಯ ಕರ್ತವ್ಯ ಸಹ ಆಗಿದೆ. ಈ ಉದ್ದೇಶದಿಂದ ಪ್ರಸಕ್ತ ಸಾಲಿನ ಸಂಭವನೀಯ ಅತಿವೃಷ್ಠಿ, ಪ್ರವಾಹದಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ನೈಸರ್ಗಿಕ ವಿಪತ್ತು ಸಮಯದಲ್ಲಿ ಸಂಭವಿಸಬಹುದಾದ ಹಾನಿಯಿಂದ ಜನರು ರಕ್ಷಣೆ ಪಡೆಯುವುದು ಹೇಗೆ ಎಂಬುವುದರ ಕುರಿತಾಗಿ ಎನ್.ಡಿ.ಆರ್.ಎಫ್ ತಂಡದಿಂದ ಅಣಕು ಪ್ರದರ್ಶನದ ಮೂಲಕ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಪ್ರವಾಹ, ಅಗ್ನಿ ಅವಘಡ, ಗ್ಯಾಸ್ ಸಿಲಿಂಡರ್ ಸ್ಪೋಟ ಸೇರಿದಂತೆ ಇತರೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮ ಕುರಿತು ಮಾಹಿತಿ ಎಲ್ಲರೂ ಸರಿಯಾಗಿ ತಿಳಿದುಕೊಂಡು ತಮ್ಮ ಅಕ್ಕ-ಪಕ್ಕದವರಿಗೂ ತಿಳಿಸಬೇಕೆಂದರು.
ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ ಮಾತನಾಡಿ, ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಪತ್ತು ನಿರ್ವಹಣೆಯ ಸಲುವಾಗಿ ವಿವಿಧ ತರಬೇತಿ ಕಾರ್ಯ ಕಾಲಾನುಕ್ರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ವಿಪತ್ತನ್ನು ಎದುರಿಸಲು ಜಿಲ್ಲಾ ಪೊಲೀಸ್ ಸದಾ ಸಿದ್ಧವಾಗಿದೆ ಮತ್ತು ಸರ್ವ ರೀತಿಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಕ್ಷಮತೆ ನಮ್ಮ ಇಲಾಖೆ ಹೊಂದಿದೆ ಎಂದು ಹೇಳಿದರು.ಎನ್.ಡಿ.ಆರ್.ಎಫ್ ಡೆಪ್ಯುಟಿ ಕಮಾಂಡೆಂಟ್ ಅಖೀಲ್ ಕುಮಾರ್ ಚೌಬೆ ಮಾತನಾಡಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬೆಟಾಲಿಯನ್ 10 ನೇ ತಂಡವು ಸಂಭವನೀಯ ವಿಪತ್ತು, ಪ್ರವಾಹ ಸ್ಥಳಗಳಿಗೆ ಆಗಮಿಸಿ ಅಲ್ಲಿ ಸಮುದಾಯ ಜಾಗೃತಿ ಕಾರ್ಯಕ್ರಮ ಮಾಡುತ್ತಿದೆ. ಸಂಭವನೀಯ ಅತಿವೃಷ್ಠಿ, ಅನಾವೃಷ್ಠಿ, ಪ್ರವಾಹ, ನೈಸರ್ಗಿಕ ವಿಪತ್ತು ಉಂಟಾಗಬಹುದಾಗ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದ ಎನ್.ಡಿ.ಆರ್.ಎಫ್ ತಂಡದ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ ಕಾರ್ಯಕ್ರಮದ ನೇತೃತ್ವವನ್ನು ಕೊಪ್ಪಳ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ವಹಿಸಿದ್ದರು.