ಕಾರವಾರ: ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಏ. 11ರಿಂದ 25ರ ವರೆಗೆ ಕರಾವಳಿ ಭೀಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ಉತ್ಸವದ ಆಯೋಜಕ ಸಮಿತಿ ಅಧ್ಯಕ್ಷ ದೀಪಕ ಕುಡಾಲಕರ ತಿಳಿಸಿದ್ದಾರೆ.
ಉದ್ಘಾಟನಾ ದಿನದಂದು ಕರ್ನಾಟಕ ಭೂಷಣ ಅದ್ವೈತ ಕುಡಾಳಕರ ಅವರಿಂದ ಗಾಂಧಾರ ವಿದ್ಯೆ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏ. 12ರಂದು ಕಲ್ಪನಾ ರಶ್ಮಿ ಕಲಾಲೋಕ ತಂಡದಿಂದ ನೃತ್ಯ ರೂಪಕ, ಕೈಗಾ ತಂಡದಿಂದ ಅಂಬೇಡ್ಕರ್ ಅರಿವು ನಾಟಕ, ವೈಶಾಲಿ ತಂಡದಿಂದ ಮೆಲೋಡಿ ವೈಬ್ಸ್ ಹಾಗೂ ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಶಿವಾನಿ ತಂಡದಿಂದ ರಸಮಂಜರಿ ನಡೆಯಲಿದೆ. ಮೂರನೇ ದಿನ ಸ್ಟಾರ್ ಚಾಯ್ಸ್ ನೃತ್ಯ ರೂಪಕ ಹಾಗೂ ಸ್ಯಾಂಡಲ್‌ವುಡ್ ಗಾಯಕ ಶ್ರೀಹರ್ಷ ತಂಡದಿಂದ ಭರ್ಜರಿ ಮನರಂಜನೆ ಇರಲಿದೆ ಎಂದು ವಿವರಿಸಿದರು.
ಏ. 14ರಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಜಿಲ್ಲೆಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರತಿಭೆಗಳನ್ನು ಸನ್ಮಾನಿಸಲಾಗುವುದು. ಬಳಿಕ ನದಿರಾಬಾನು ಮತ್ತು ಪ್ರದೀಪ ಗುನಗಿ ತಂಡದಿಂದ ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿವೆ.ಟಾಗೋರ್ ಕಡಲತೀರದಲ್ಲಿ ಬೃಹತ್ ಅಮ್ಯೂಸ್‌ಮೆಂಟ್ ಪಾರ್ಕ್ ತಲೆ ಎತ್ತಲಿದೆ. ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಆಲೆಮನೆ, ಮಾವು ಮೇಳ ಹಾಗೂ ಹಲಸಿನ ಮೇಳವನ್ನು ಆಯೋಜಿಸುತ್ತಿರುವುದು ಮತ್ತೊಂದು ವಿಶೇಷ. ಇದರೊಂದಿಗೆ ಸ್ಥಳೀಯ ಬುಡಕಟ್ಟು ಮತ್ತು ಪರಿಶಿಷ್ಟ ಜನಾಂಗದವರು ತಯಾರಿಸಿದ ಗುಡಿ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.