ಕುರುಗೋಡು: ಪ್ರಕೃತಿ ವಿಕೋಪ ಸೇರಿ ಇತರ ಯಾವುದೇ ಅವಘಡ ಸಂಭವಿಸಿದಾಗ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸೇವೆ ಅನನ್ಯ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಹೇಳಿದರು.
ಕುಡುತಿನಿ ಬಿಟಿಪಿಎಸ್ ನ ಶೀತಲೀಕರಣ ಗೋಪುರ ೩ರ ಬಳಿ ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಷ್ಟ್ರೀಯ ಸ್ಪಂದನಾ ಪಡೆ ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸಂಯುಕ್ತಾಶ್ರಯಲ್ಲಿ ಆಯೋಜಿಸಿದ್ದ ಕಟ್ಟಡ ಕುಸಿತದ ಆನ್ ಸೈಟ್ ಅಣಕು ಪ್ರದರ್ಶನದಲ್ಲಿ ಮಾತನಾಡಿದರು.ಅವಘಡ ನಿವಾರಣೆಗೆ ವಿವಿಧ ಇಲಾಖೆ ಪರಸ್ಪರ ಸಹಯೋಗದ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಹೀಗಾಗಿ ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ನಿಯಮಿತವಾಗಿ ತರಬೇತಿ ಮತ್ತು ಅಣಕು ಪ್ರದರ್ಶನ ನಡೆಸಬೇಕು ಎಂದು ಸಲಹೆ ನೀಡಿದರು.
ಬಳ್ಳಾರಿಯ ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ ಮಾತನಾಡಿ, ಅವಘಡದ ವೇಳೆ ಸಂಭವಿಸಿದಾಗ ತಕ್ಷಣ ಕಾರ್ಯ ಪ್ರವತ್ತವಾಗುವ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯು ನಾಗರಿಕರ ಜೀವ ರಕ್ಷಿಸುವಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ ಎಂದು ಶ್ಲಾಘಿಸಿದರು.ಅಣಕು ಪ್ರದರ್ಶನ ಆರಂಭದಲ್ಲಿ ಕಟ್ಟಡ ಕುಸಿತ ವೇಳೆ ಎಚ್ಚರಿಕೆ ಗಂಟೆ ನೀಡುವ ಮೂಲಕ ಸುರಕ್ಷಿತ ಸ್ಥಳಕ್ಕೆ ಬಂದು ಹಾಜರಾಗುವ ವಿಧಾನ, ಹಾಜರಾದ ಕಾರ್ಮಿಕರ ಹಾಜರಾತಿ ಮತ್ತು ಯಾವ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತು.
ಈ ವೇಳೆ ಕೇಂದ್ರ ವಿಪತ್ತು ನಿರ್ವಹಣಾ ಪಡೆಯ ಇನ್ಸ್ ಪೆಕ್ಟರ್ ರಾಮ್ ಭಜ್, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಉದಯ ನಾಯ್ಕ ಎನ್, ವಿವಿಧ ವಿಭಾಗಗಳ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಜ್ಯೋತಿಲಕ್ಷ್ಮೀ ಸಿ.ಎನ್., ಅಶೋಕ್ ಬೊಮ್ಮನಹಳ್ಳಿ, ಅಶೋಕ್ ಎಚ್., ತೋರಣಗಲ್ಲು ಉಪವಿಭಾಗದ ಡಿವೈಎಸ್ಪಿ ಪ್ರಸಾದ್ ಗೋಖಲೆ ಇದ್ದರು.ಕುರುಗೋಡು ತಾಲೂಕಿನ ಕುಡುತಿನಿ ಬಿಟಿಪಿಎಸ್ ನ ಶೀತಲೀಕರಣ ಗೋಪುರ-೩ ರ ಬಳಿ ವಿವಿಧ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಟ್ಟಡ ಕುಸಿತದ ಆನ್ ಸೈಟ್ ಅಣಕು ಪ್ರದರ್ಶನ ನಡೆಯಿತು.