ಕನ್ನಡಪ್ರಭ ವಾರ್ತೆ ಮಂಡ್ಯ
ಯೋಜನೆಯ ಯಶಸ್ಸಿನ ಬಗ್ಗೆ ಪ್ರಚಾರ ಮಾಡುತ್ತಿರುವ ಸರ್ಕಾರವೇ ಫಲಾನುಭವಿಗಳಿಗೆ ನಿಗದಿತ ಸಮಯಕ್ಕೆ ಹಣ ಪಾವತಿಸದೆ ವಿಳಂಬ ಮಾಡುತ್ತಿರುವುದು ಖಂಡನೀಯ. ವಿಶೇಷವಾಗಿ ೨೦೨೫ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಕಂತುಗಳು ಇದುವರೆಗೂ ಬಿಡುಗಡೆಯಾಗಿಲ್ಲ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಈ ಎರಡು ತಿಂಗಳ ಬಾಕಿ ಮೊತ್ತ ಸುಮಾರು ೫,೦೦೦ ಕೋಟಿಯಷ್ಟಿದೆ ಎನ್ನುವುದೂ ನ್ಯಾಯಾಲಯದ ವಿಚಾರಣೆಯಲ್ಲಿ ಪ್ರಸ್ತಾಪವಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ೨ ಸಾವಿರ ರು. ತಲುಪಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ, ಅಧಿಕಾರಕ್ಕೆ ಬಂದ ನಂತರ ಅದೇ ಹಣವನ್ನು ತಿಂಗಳುಗಟ್ಟಲೆ ವಿಳಂಬ ಮಾಡುವುದು ವಚನಭಂಗವಲ್ಲದೆ ಮತ್ತೇನು?.ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರ ಮನೆ ಖರ್ಚು, ಔಷಧ, ಮಕ್ಕಳ ಶಿಕ್ಷಣ ಮತ್ತು ದಿನನಿತ್ಯದ ಅಗತ್ಯಗಳಿಗೆ ನೆರವಾಗಬೇಕಾದ ಹಣವನ್ನು ಸಮಯಕ್ಕೆ ನೀಡದೆ ಮಹಿಳೆಯರನ್ನು ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕುಗಳ ಮುಂದೆ ಅಲೆದಾಡುವಂತೆ ಮಾಡಿರುವುದು ಸರ್ಕಾರದ ಮಹಿಳಾ ವಿರೋಧಿ ನಡೆಯಾಗಿದೆ ಎಂದು ಟೀಕಿಸಿದ್ದಾರೆ.
ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದರ ನೆಪದಲ್ಲಿ ಈಗಾಗಲೇ ಅರ್ಹರೆಂದು ಗುರುತಿಸಿ ಹಣ ಪಡೆದಿರುವ ನೈಜ ಫಲಾನುಭವಿಗಳ ಹೆಸರನ್ನು ಏಕಾಏಕಿ ಕೈಬಿಡುವುದು, ಹಣ ತಡೆಹಿಡಿಯುವುದು ಅಥವಾ ಸಮರ್ಪಕ ಪರಿಶೀಲನೆ ಹಾಗೂ ನೋಟಿಸ್ ನೀಡದೆ ಹಣ ವಾಪಸ್ ಪಡೆಯಲು ಮುಂದಾಗುವುದು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂಖ್ಯೆ, ಪಾವತಿಸಿದ ಕಂತುಗಳು, ಬಾಕಿ ಇರುವ ಮೊತ್ತ, ಕೈಬಿಟ್ಟ ಫಲಾನುಭವಿಗಳ ಸಂಖ್ಯೆ ಮತ್ತು ಕಾರಣಗಳ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಮಹಿಳೆಯರ ಸ್ವಾಭಿಮಾನವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡು, ಅವರದೇ ಹಕ್ಕಿನ ಹಣಕ್ಕಾಗಿ ಕಾಯಿಸುವುದು ಜನಪರ ಆಡಳಿತವಲ್ಲ. ಬಾಕಿ ಉಳಿಸಿಕೊಂಡಿರುವ ಪ್ರತಿಯೊಂದು ರೂಪಾಯಿಯನ್ನೂ ತಕ್ಷಣವೇ ಪಾವತಿಸುವಂತೆ ಆಗ್ರಹಪಡಿಸಿದ್ದಾರೆ.