ಹೈನುಗಾರಿಕೆ ನಂಬಿರುವ ರೈತ ಕುಟುಂಬ ಇಡೀ ಗ್ರಾಮದಲ್ಲಿದೆ. ಶ್ರಮಿಕ ವರ್ಗ ಸ್ವಾವಲಂಭಿಯಾಗಿ ಬದುಕಲು ಕೆರೆ ನೀರು ಅವಶ್ಯವಿದೆ. ಸಣ್ಣ ಮಳೆಯಾದರೂ ಕೆರೆಗೆ ನೀರು ಬರುತ್ತಿತ್ತು. ಕೆರೆಗೆ ಬರುತ್ತಿದ್ದ ನೀರಿನ ಮೂಲ ಮುಚ್ಚಲ್ಪಟ್ಟಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕೆರೆ ತುಂಬಿಸಿ ಜನ ಜಾನುವಾರುಗಳಿಗೆ ಕುಡಿಯಲು ಮೊದಲು ನೀರುಕೊಟ್ಟು ಜೀವ ಉಳಿಸುವಂತೆ ಆಗ್ರಹಿಸಿ ಗಂಗೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಪಟ್ಟಣದ ಹೇಮಾವತಿ ನಾಲೆ ಉಪವಿಭಾಗ ನಂ.10 ಕಚೇರಿ ಎದುರು ಗ್ರಾಮಸ್ಥರು ಕೆರೆ ಪಾತ್ರದ ರೈತರು ಗಂಗೇನಹಳ್ಳಿ ಕೆರೆಗೆ ನೀರು ತುಂಬಿಸಲು ಪ್ರತಿಭಟನೆ ನಡೆಸಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ರೈತ ಕೃಷ್ಣಯ್ಯ ಮಾತನಾಡಿ, ಕೆರೆಗೆ ಹಲವು ವರ್ಷಗಳಿಂದ ಸಮರ್ಪಕವಾಗಿ ನೀರು ತುಂಬಿಯೇ ಇಲ್ಲ. ಕೆರೆ ನಂಬಿ ರೈತರು ಅತಂತ್ರವಾಗುವಂತಾಗಿದೆ. ಈ ಬಾರಿ ಮಳೆ ಇಲ್ಲದೆ ಬೆಳೆಯೂ ಇಲ್ಲವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಾಲ ಮಾಡಿ ಎಮ್ಮೆ, ದನ ಖರೀದಿಸಿದ್ದೇವೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಹಸಿರು ಮೇವು ಇಲ್ಲವಾಗಿದೆ. ಕನಿಷ್ಠ ಕೆರೆ ತುಂಬಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಬೇಕಾಗಲಿದೆ ಎಂದರು.
ರೈತ ಗುಂಡ ಮಾತನಾಡಿ, ಹೈನುಗಾರಿಕೆ ನಂಬಿರುವ ರೈತ ಕುಟುಂಬ ಇಡೀ ಗ್ರಾಮದಲ್ಲಿದೆ. ಶ್ರಮಿಕ ವರ್ಗ ಸ್ವಾವಲಂಭಿಯಾಗಿ ಬದುಕಲು ಕೆರೆ ನೀರು ಅವಶ್ಯವಿದೆ. ಸಣ್ಣ ಮಳೆಯಾದರೂ ಕೆರೆಗೆ ನೀರು ಬರುತ್ತಿತ್ತು. ಕೆರೆಗೆ ಬರುತ್ತಿದ್ದ ನೀರಿನ ಮೂಲ ಮುಚ್ಚಲ್ಪಟ್ಟಿದೆ ಎಂದರು.ಮಳೆಗೆ ಕೆರೆಯಲ್ಲಿನ ಸಣ್ಣಪುಟ್ಟ ಗುಂಡಿಗಳು ತುಂಬಿಕೊಳ್ಳುತ್ತಿದ್ದವು. ಈಗ ಎಲ್ಲ ಒತ್ತುವರಿಯಾಗಿದೆ. ಇವುಗಳನ್ನು ತೆರವು ಮಾಡಿಸಬೇಕು. ಮಳೆಗಾಲದಲ್ಲಿಯೇ ಕೆರೆಯಲ್ಲಿ ನೀರು ಇಲ್ಲವಾದರೆ ರೈತರು ಬದುಕಲು ಸಾಧ್ಯವೇ ಇಲ್ಲ ಎಂದು ಬೇಸರಿಸಿದರು.
ಕೆರೆ ಪಾತ್ರದಲ್ಲಿ ನೂರಾರು ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಕೆರೆ ತುಂಬಿದರೆ ರೈತರ ಕೊಳವೆ ಬಾವಿ ಅಂರ್ತಜಲ ಹೆಚ್ಚಲಿದೆ. ವಿ.ಬಿ-ಜಿ ರಾಮ್‌ಜೀ ಯೋಜನೆಯಿಂದ ಕೆರೆ ಹೂಳು ತೆಗೆಯಲಾಗುತ್ತಿದೆ ಎಂಬ ನೆಪ ಮಾಡದೇ ಕಾರ್ಮಿಕರಿಗೆ ಕೆರೆ ಏರಿಯಲ್ಲಿನ ಜಂಗಲ್ ತೆಗೆಯುವ ಉದ್ಯೋಗ ನೀಡಬೇಕು. ಕೆರೆಗೆ ನೀರು ತುಂಬಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಶರತ್, ಕೃಷ್ಣಯ್ಯ, ಗುಂಡ, ಚಂದ್ರ, ಧರ್ಮ, ಕುಮಾರ್, ನಂಜುಂಡ, ಗವಿರಂಗ, ಮಂಜು, ರಾಜಣ್ಣ, ಸಚಿನ್, ದೇವರಾಜು, ಚಂದು ಇದ್ದರು.
ಈ ಕುರಿತು ಹೇಮಾವತಿ ನಾಲೆ ಉಪವಿಭಾಗ ನ.10 ಎಇಇ ಎಸ್.ಜೆ.ಸುಧಾ ಮಾತನಾಡಿ, ತಮ್ಮ ವ್ಯಾಪ್ತಿಗೆ 25 ಕೆರೆಗಳು ಬರಲಿವೆ. ಎಲ್ಲಾ ಕೆರೆ ಕಟ್ಟೆಗಳನ್ನು ಆದ್ಯತೆ ಮೇರೆ ಹಂತ ಹಂತವಾಗಿ ನೀರು ತುಂಬಿಸಲಾಗುವುದು. ರೈತರಿಗೆ ಯಾವುದೇ ಆತಂಕ ಬೇಡ ಎಂದು ಭರವಸೆ ನೀಡಿದರು.