ಕೆ.ಆರ್.ಪೇಟೆ ತಾಲೂಕಿನಲ್ಲಿ ಬರ ಪರಿಸ್ಥಿತಿ, ಕೆರೆ-ಕಟ್ಟೆಗಳಲ್ಲಿನ ನೀರಿನ ಸಂಗ್ರಹ, ಅಂತರ್ಜಲ ಮಟ್ಟ, ಬೆಳೆಗಳ ಸ್ಥಿತಿಗತಿ ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಪರಿಶೀಲಿಸಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಸಮರ್ಪಕವಾಗಿ ನಿರ್ವಹಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ಪಟ್ಟಣದ ರೇಷ್ಮೆ ಇಲಾಖೆ ಆಡಳಿತ ತರಬೇತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಹಾಗೂ ಜಿಪಂ ಸಿಇಒ ಕೆ.ಆರ್.ನಂದಿನಿ ಉಪಸ್ಥಿತಿಯಲ್ಲಿ ತಾಲೂಕಿನ ಬರ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ, ವಸತಿ ಮತ್ತು ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಜೊತೆಗೆ ವಿವಿಧ ಅಭಿವೃದ್ಧಿ ವಿಷಯಗಳ ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಕುಡಿಯುವ ನೀರಿನ ನಿರ್ವಹಣೆಗೆ ಪ್ರಥಮ ಆದ್ಯತೆ ನೀಡಬೇಕು. ಗ್ರಾಮವಾರು ನೀರಿನ ಲಭ್ಯತೆ ಹಾಗೂ ಬೇಡಿಕೆ ಪರಿಶೀಲಿಸಿ ಮುಂಚಿತವಾಗಿಯೇ ಗುರುತಿಸಬೇಕು. ಕೊಳವೆಬಾವಿ, ಪಂಪ್‌ಸೆಟ್ ಹಾಗೂ ಪೈಪ್‌ಲೈನ್‌ಗಳ ದುರಸ್ತಿಯನ್ನು ವಿಳಂಬವಿಲ್ಲದೆ ಕೈಗೊಂಡು ಅಗತ್ಯವಿರುವ ಕಡೆ ಪರ್ಯಾಯ ನೀರಿನ ಮೂಲಗಳನ್ನು ಗುರುತಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ತಾಪಂ ಇಒಗಳು ಮುಂಜಾಗ್ರತಾ ವಹಿಸಿ ತೊಂದರೆ ಸರಿಪಡಿಸಲು ಗ್ರಾಪಂಗಳನ್ನು ಸಜ್ಜುಗೊಳಿಸಬೇಕು. ಒಂದು ವೇಳೆ ಅಧಿಕಾರಿಗಳು ಲೋಪ ಮಾಡಿದರೆ ದಂಡನೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಲ ಜೀವನ್ ಮಿಷನ್ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಹಾಗೂ ಅಪೂರ್ಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

ತಾಲೂಕಿನಲ್ಲಿ ಬರ ಪರಿಸ್ಥಿತಿ, ಕೆರೆ-ಕಟ್ಟೆಗಳಲ್ಲಿನ ನೀರಿನ ಸಂಗ್ರಹ, ಅಂತರ್ಜಲ ಮಟ್ಟ, ಬೆಳೆಗಳ ಸ್ಥಿತಿಗತಿ ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಪರಿಶೀಲಿಸಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ವಸತಿ ಮತ್ತು ನಿವೇಶನ ರಹಿತ ಅರ್ಹ ಕುಟುಂಬಗಳನ್ನು ಗುರುತಿಸಿ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಗ್ರಾಮವಾರು ಲಭ್ಯವಿರುವ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದರು.

ಕೃಷಿ, ಪಶುಸಂಗೋಪನೆ, ನರೇಗಾ ಕಾಮಗಾರಿಗಳು, ಜಲ ಸಂರಕ್ಷಣೆ, ವಿದ್ಯುತ್ ಹಾಗೂ ಸಾರ್ವಜನಿಕರ ಇತರೆ ಸಮಸ್ಯೆಗಳ ಕುರಿತು ಪರಿಶೀಲಿಸಲಾಯಿತು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಜನರ ಸಮಸ್ಯೆಗಳಿಗೆ ಸ್ಥಳೀಯ ಹಂತದಲ್ಲಿಯೇ ತ್ವರಿತವಾಗಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಶ್ರೇಯಸ್, ತಾಪಂ ಇಒ ಕೆ.ಸುಷ್ಮ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.