ಮಾನವೀಯ ಕರ್ತವ್ಯ ನಿರ್ವಹಣೆ: ದಿನಕರ ಶೆಟ್ಟಿ ಸೂಚನೆ

KannadaprabhaNewsNetwork |  
Published : Sep 10, 2026, 02:30 AM IST
ದಿನಕರ ಶೆಟ್ಟಿ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಮಡಿಕೇರಿ ಲೋಕಾಯುಕ್ತದ ಡಿವೈಎಸ್‌ಪಿ ಅವರಿಂದ ನಗರದ ತಹಸೀಲ್ದಾರ್‌ ಕಚೇರಿಯಲ್ಲಿ ಬುಧವಾರ ದೂರು ಅರ್ಜಿ ಸ್ವೀಕಾರ ನಡೆಯಿತು. ಈ ವೇಳೆ 4 ಅರ್ಜಿಗಳು ಸಲ್ಲಿಕೆಯಾದವು.

ಮಡಿಕೇರಿ : ಮಡಿಕೇರಿ ಲೋಕಾಯುಕ್ತದ ಡಿವೈಎಸ್‌ಪಿ ಅವರಿಂದ ನಗರದ ತಹಸೀಲ್ದಾರ್‌ ಕಚೇರಿಯಲ್ಲಿ ಬುಧವಾರ ದೂರು ಅರ್ಜಿ ಸ್ವೀಕಾರ ನಡೆಯಿತು. ಈ ವೇಳೆ 4 ಅರ್ಜಿಗಳು ಸಲ್ಲಿಕೆಯಾದವು. ಈ ಸಂದರ್ಭ ಮನವಿದಾರರಲ್ಲಿ ಒಬ್ಬರಾದ ಬಾಲಕೃಷ್ಣ ಅವರು ಕಳೆದ ಮೂರು ವರ್ಷಗಳಿಂದ ಭೂಮಿ ದುರಸ್ತಿ ದಾಖಲೆಗಾಗಿ ಕಚೇರಿಗೆ ಅಲೆಯುತ್ತಿದ್ದು, ಇನ್ನೂ ಭೂಮಿ ದುರಸ್ತಿಯಾಗಿಲ್ಲ ಎಂದರು. ಮತ್ತೊಬ್ಬರು ಭೂಮಿ ಒತ್ತುವರಿಯಾಗಿದ್ದು, ಸರ್ವೆ ಮಾಡಿ ಸರಿಪಡಿಸುವಂತೆ ಮನವಿ ಮಾಡಿದ್ದು, ಇದುವರೆಗೆ ಈ ಕಾರ್ಯ ಆಗಿಲ್ಲ ಎಂದು ದೂರಿದರು.

ಜಮೀನು ಖಾತೆ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಸಹ ಇದುವರೆಗೆ ಯಾವುದೇ ಕೆಲಸ ಆಗಿಲ್ಲ ಎಂದು ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು. ಭೂಮಿ ದುರಸ್ತಿ ದಾಖಲೆ ಸಮರ್ಪಕವಾದಲ್ಲಿ ಕುಟುಂಬದವರಿಗೆ ಪಾಲು ಮಾಡಲು ಸಹಕಾರಿಯಾಗಲಿದೆ. ಸಣ್ಣ ಪುಟ್ಟ ಭೂಮಿ ಹೊಂದಿರುವವರು ಭೂಮಿ ವಿಭಜನೆಗೆ ಭೂಮಿ ದುರಸ್ತಿ ದಾಖಲೆಯಿಲ್ಲದೆ ಅನುಕೂಲವಾಗಲಿದೆ. ಇದನ್ನು ಮಾಡದೆ ಕುಟುಂಬದವರಿಗೆ ಭಾಗ ಮಾಡುವುದು ಕಷ್ಟವಾಗಲಿದೆ ಎಂದು ಮನವಿದಾರರು ಡಿವೈಎಸ್‌ಪಿ ಅವರ ಗಮನಕ್ಕೆ ತಂದರು. ದೂರುದಾರರ ಮನವಿಯನ್ನು ತಾಳ್ಮೆಯಿಂದ ಆಲಿಸಿದ ಲೋಕಾಯುಕ್ತ ಡಿವೈಎಸ್‌ಪಿ ದಿನಕರಶೆಟ್ಟಿ ಅವರು ಕಳೆದ ಮೂರು ವರ್ಷಗಳಿಂದ ಭೂಮಿ ದುರಸ್ತಿ ಮಾಡದೆ ಕಚೇರಿಗೆ ಅಲೆಸುವುದು ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಾರ್ವಜನಿಕರನ್ನು ಅಲೆಸುವುದಾಗಲಿ ಅಥವಾ ಸತಾಯಿಸುವುದಾಗಲಿ ಸರಿಯಲ್ಲ. ಮಾನವೀಯತೆ ದೃಷ್ಟಿಯಿಂದ ಕೆಲಸ ನಿರ್ವಹಿಸಬೇಕು. 15 ದಿನದಲ್ಲಿ ಭೂಮಿ ದುರಸ್ತಿ ಕೆಲಸ ಆಗದಿದ್ದಲ್ಲಿ ಮತ್ತೊಮ್ಮೆ ಗಮನಕ್ಕೆ ತರುವಂತೆ ಲೋಕಾಯುಕ್ತ ಡಿವೈಎಸ್‌ಪಿ ಮನವಿದಾರರಿಗೆ ಸಲಹೆ ಮಾಡಿದರು. ಖಾಲಿ ನಿವೇಶನದಲ್ಲಿನ ಉದ್ಯಾನವನ ಜಾಗವನ್ನು ಸಹ ಖಾತೆ ಮಾಡಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಇಂತಹ ಕೆಲಸಗಳಿಗೆ ಇಳಿಯಬಾರದು. ಸಾರ್ವಜನಿಕರ ದೂರು ಬಂದಾಗ ಸ್ಪಂದಿಸುವುದು ಅಧಿಕಾರಿಗಳ ಕೆಲಸವಾಗಿದೆ ಎಂದು ಸೂಚಿಸಿದರು. ಬಿಸಿ ನೀರು ಕೊಡಿ: ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಇವರಿಗೆ ಸಮಯಕ್ಕೆ ಸರಿಯಾಗಿ ಬಿಸಿನೀರು ಒದಗಿಸುವಂತೆ ನಿರ್ದೇಶನ ನೀಡಿದರು. ಕೆಲವು ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಬಿಸಿ ನೀರು ಇಲ್ಲದೆ, ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು. ಮಾಹಿತಿ ಪಡೆದ ಅಧಿಕಾರಿಗಳು: ರಾಜಾಸೀಟ್ ಬಳಿಯ ಕೂರ್ಗ್ ವಿಲೇಜ್ ಬಗ್ಗೆಯೂ ಸಹ ಲೋಕಾಯುಕ್ತ ಡಿವೈಎಸ್‌ಪಿ ಅವರು ಮಾಹಿತಿ ಪಡೆದರು. ಕೂರ್ಗ್ ವಿಲೇಜ್ ಜಾಗವು ಸಾರ್ವಜನಿಕ ಉಪಯೋಗಕ್ಕೆ ಬಾರದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿವಿಧ ಕಚೇರಿಗಳಲ್ಲಿ ಲೋಕಾಯುಕ್ತ ನಾಮಫಲಕದಲ್ಲಿ ಸಂಚಾರಿ ದೂರವಾಣಿ ಸಂಖ್ಯೆಯನ್ನು ಸರಿಯಾಗಿ ಕಾಣುವಂತೆ ಬರೆಯಬೇಕು. ಕೆಲವು ಕಡೆಗಳಲ್ಲಿ ಸರಿಯಾಗಿ ಕಾಣದೆ ಸಣ್ಣದಾಗಿ ಬರೆದಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದು ಹೇಳಿದರು. ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ವೀಣಾ ನಾಯಕ್ ಅವರು ಮಾತನಾಡಿದರು.

ಕಡಗದಾಳುವಿನ ಶಿವಶಂಕರ, ಯವಕಪಾಡಿಯ ಕೆ.ಬಿ.ಪೊಣ್ಣಪ್ಪ, ಮೇಕೇರಿಯ ಕೆ.ಎಸ್.ಮೊಣ್ಣಪ್ಪ ಅವರು ಲೋಕಾಯುಕ್ತ ದೂರು ಅರ್ಜಿ ಸಂದರ್ಭದಲ್ಲಿ ಭೂಮಿ ವಿಲೇವಾರಿ ಸಂಬಂಧಿಸಿದಂತೆ ಮನವಿ ಮಾಡಿದರು.

ತಾ.ಪಂ.ಇಒ ಶೇಖರ್ ಕಳೆದ ಬಾರಿ ನಡೆದ ಸಭಾ ನಡಾವಳಿಯನ್ನು ಓದಿದರು. ಶಿರಸ್ತೇದಾರ್‌ರಾದ ದೇವರಾಜು ಅವರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಭೂದಾಖೆಗಳ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಹಲವು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
ತಂತ್ರಜ್ಞಾನ ಬಳಸಿ ಶಿಕ್ಷಣ ನೀಡಿ: ಮಂತರ್ ಗೌಡ