ಕುಶಾಲನಗರದ ಪಿ.ಎಂ.ಶ್ರೀ ಶಾಲೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ನವ ಸಾಕ್ಷರರಿಗೆ ಸನ್ಮಾನ ಕಾರ್ಯಕ್ರಮವು ಮಂಗಳವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕುಶಾಲನಗರದ ಪಿ.ಎಂ.ಶ್ರೀ ಶಾಲೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ನವ ಸಾಕ್ಷರರಿಗೆ ಸನ್ಮಾನ ಕಾರ್ಯಕ್ರಮವು ಮಂಗಳವಾರ ನಡೆಯಿತು. ಜಿಲ್ಲಾ ಸಾಕ್ಷರತಾ ನೋಡಲ್ ಅಧಿಕಾರಿ ಡಾ.ಹೇಮಂತ್ ರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಕೊಡಗು ಜಿಲ್ಲೆಯು ಶೇ.93 ಸಾಕ್ಷರತೆ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಹಾಗೂ ಕೆಲವೇ ದಿನಗಳಲ್ಲಿ ಕೊಡಗು ಜಿಲ್ಲೆಯನ್ನು ‘ಸಂಪೂರ್ಣ ಸಾಕ್ಷರತಾ ಜಿಲ್ಲೆ’ ಎಂದು ಘೋಷಿಸಲಾಗುವುದು ಎಂದರು.ಡಯಟ್ ಉಪ ನಿರ್ದೇಶಕರು(ಅಭಿವೃದ್ಧಿ) ರಾಮ ಚಂದ್ರೇರಾಜೇ ಅರಸ್ ಅವರು ಶಾಲೆಯಲ್ಲಿ ಪಿ.ಎಂಶ್ರೀ ದ್ವಿಭಾಷಾ ಚಟುವಟಿಕೆಗಳ ಕೊಠಡಿ ಉದ್ಘಾಟಿಸಿ ಮಾತನಾಡಿ, ಬಹಳ ದಿನಗಳಿಂದ ಈ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರ ಪರಿಶ್ರಮದಿಂದ ಕೊಠಡಿ ನಿರ್ಮಾಣವಾಗಿದೆ ಎಂದರು. ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅವರು ಮಾತನಾಡಿ ಜರ್ಮನಿ, ಅಮೆರಿಕ, ಇಂಗ್ಲೆಂಡ್ ದೇಶಗಳಲ್ಲಿ ನೂರಕ್ಕೆ ನೂರರಷ್ಟು ಸಾಕ್ಷರತೆ ಸಾಧಿಸಿದ್ದಾರೆ. ಸಾಕ್ಷರತೆ ಸಾಧಿಸಿರುವ ಈ ಎಲ್ಲಾ ದೇಶಗಳಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿಸಿದರು. ಸಹಾಯಕರಾದ ರವಿಶಂಕರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಮೂರು ತಾಲೂಕುಗಳ ನವ ಸಾಕ್ಷರತರಿಗೆ ಸನ್ಮಾನಿಸಲಾಯಿತು. ವಿಭಾಗ ಮಟ್ಟದಲ್ಲಿ ಅಧಿಕಾರಿಗಳ ಸಭೆಯಲ್ಲಿ ನಂಜರಾಯಪಟ್ಟಣ ಕ್ಲಸ್ಟರ್‌ನ ನೆಲ್ಲಿಹುದಿಕೇರಿ ಪ್ರಧಾನ ಮುಖ್ಯ ಶಿಕ್ಷಕ ಆಶಾ ಅವರನ್ನು ಪ್ರಶಂಸಿದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹೇಶ್, ಶಿಕ್ಷಣಾಧಿಕಾರಿ ಸೌಮ್ಯ ಪೊನ್ನಪ್ಪ, ಪಿ.ಎಂ.ಶ್ರೀ ಶಾಲೆಯ ಎಸ್‌ಡಿಎಂಸಿ ಸಮಿತಿಯ ಅಧ್ಯಕ್ಷರಾದ ಚಂದನ್ ಕುಮಾರ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸಿ.ಸೌಮ್ಯ, ಡಯಟ್‌ನ ಹಿರಿಯ ಉಪನ್ಯಾಸಕರಾದ ಕೃಷ್ಣಪ್ಪ, ಸ್ವಾಮಿ, ಪುಷ್ಪ, ವಿಜಯ್, ಪಿ.ಎಂ.ಶ್ರೀ ಶಾಲೆಯ ಮುಖ್ಯೋಪಾಧ್ಯಾಯರಾದ ಸಣ್ಣಸ್ವಾಮಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಚಂದನ್ ಕುಮಾರ್, ಕಾರ್ಯಕ್ರಮದಲ್ಲಿ ಮೂರು ತಾಲೂಕುಗಳ ಸಿಆರ್‌ಪಿ, ಬಿ.ಆರ್.ಪಿ.ಗಳು ಹಾಜರಿದ್ದರು. ಪ್ರೌಢಶಾಲಾ ಪವಿತ್ರ ಮತ್ತು ತಂಡದವರು ಪ್ರಾರ್ಥಿಸಿದರು. ಡಯಟ್ ಉಪನ್ಯಾಸಕರಾದ ಹೇಮಂತ್ ರಾಜ್ ಅವರು ಸ್ವಾಗತಿಸಿದರು. ಸಿ.ಆರ್.ಪಿ ಶಾಂತಕುಮಾರ್ ಅವರು ನಿರೂಪಿಸಿದರು, ಬಿ.ಆರ್.ಪಿ ಪುಷ್ಪ ವಂದಿಸಿದರು.