ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಬಾಸ್ಕೆಟ್ ಬಾಲ್ ಮೈದಾನದ ಬದಿಯಲ್ಲಿ ನಿರ್ಮಿಸುತ್ತಿರುವ ತಡೆಗೋಡೆ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ ಹಿನ್ನೆಲೆ ಸ್ಥಳಕ್ಕೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಬಾಸ್ಕೆಟ್ ಬಾಲ್ ಮೈದಾನದ ಬದಿಯಲ್ಲಿ ನಿರ್ಮಿಸುತ್ತಿರುವ ತಡೆಗೋಡೆ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ ಹಿನ್ನೆಲೆ ಸ್ಥಳಕ್ಕೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸ್ಥಳದಲ್ಲಿದ್ದ ಸ್ಥಳೀಯರು, ಕಳಪೆ ಕಾಮಗಾರಿ ಮಾಡುತ್ತಿದ್ದುದನ್ನು ನಾವು ಪ್ರಶ್ನಿಸಿ ಕಾಮಗಾರಿಗೆ ತಡೆಯೊಡ್ಡಿದ್ದೇವೆ. ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸುತ್ತಿಲ್ಲ. ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಸಂಚರಿಸಲೂ ಭಯಪಡುವಂತಾಗಿದೆ ಎಂದರು.
ಅರ್ಧಕ್ಕೆ ಸ್ಥಗಿತಗೊಂಡಿರುವ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದ ನಂತರ ಮಾತನಾಡಿದ ಅಪ್ಪಚ್ಚು ರಂಜನ್ ಅವರು, ಬಾಸ್ಕೆಟ್‌ಬಾಲ್ ಮೈದಾನಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ ಮೇಲ್ನೋಟಕ್ಕೆ ಅವೈಜ್ಞಾನಿಕವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಸ್ಥಳೀಯರು ಗಲಾಟೆ ಮಾಡಿದ ನಂತರ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕಳೆದ ಬಾರಿ ಸಣ್ಣ ನೀರಾವರಿ ಇಲಾಖೆಯಿಂದ ಟರ್ಫ್ ಮೈದಾನದ ಬದಿಯಲ್ಲಿ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿತ್ತು. ಇಂತಹ ಕಳಪೆ ಕಾಮಗಾರಿಗೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು.ಆಲೇಕಟ್ಟೆ-ತೋಳೂರುಶೆಟ್ಟಳ್ಳಿ ರಸ್ತೆ ವರ್ಷದೊಳಗೆ ಹಾಳಾಗಿದೆ. ಕಾಂಕ್ರೀಟ್ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈಗಾಗಲೇ ಬಿರುಕುಬಿಟ್ಟಿರುವ ಕಾಂಕ್ರೀಟ್ ರಸ್ತೆಯನ್ನು ಕಿತ್ತು ಸರ್ವ ಋತು ರಸ್ತೆಯನ್ನಾಗಿ ಗುಣಮಟ್ಟದಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿದ ಅವರು, ಈ ಎಲ್ಲಾ ಕಳಪೆ ಕಾಮಗಾರಿಗಳ ಬಗ್ಗೆಯೂ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ಟರ್ಫ್ ಮೈದಾನ ಅವ್ಯವಸ್ಥೆಯಿಂದ ಕೂಡಿದೆ. ತಕ್ಷಣ ಇಲಾಖೆಯ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಮೈದಾನದ ಸುಸ್ಥಿತಿಗೆ ಕ್ರಮ ವಹಿಸಬೇಕು ಎಂದು ಅಪ್ಪಚ್ಚು ರಂಜನ್ ಒತ್ತಾಯಿಸಿದರು.ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ನಗರೋತ್ಥಾನ ಯೋಜನೆಯಡಿ 5 ಕೋಟಿ ಅನುದಾನ ನೀಡಿದ್ದೆವು. ಇದರಲ್ಲಿ ರಸ್ತೆ ಬದಿಯಲ್ಲಿ ಫುಟ್‌ಪಾತ್ ನಿರ್ಮಾಣ, ಇಂಟರ್‌ಲಾಕ್ ಕಾಮಗಾರಿಗೆ ಅನುದಾನ ಮೀಸಲಿಟ್ಟಿದ್ದರೂ ಈವರೆಗೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಅಮೃತ್-2 ಯೋಜನೆಯಡಿ ಕುಡಿಯುವ ನೀರಿಗೆ 15 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದೆವು. ಅದೂ ಕೂಡ ಸಮರ್ಪಕವಾಗಿ ಮಾಡಿಲ್ಲ ಎಂದು ಆರೋಪಿಸಿದರು.
ಅಮೃತ್-2 ಯೋಜನೆಯಡಿ ಹೊಸ ಟ್ಯಾಪ್, ಪೈಪ್ ಲೈನ್ ಮಾಡಬೇಕಿತ್ತು. ಆದರೆ, ಈವರೆಗೂ ಜನರಿಗೆ ಸಮರ್ಪಕ ನೀರು ಬರುತ್ತಿಲ್ಲ. ಕುಶಾಲನಗರ ಹಾಗೂ ಮಡಿಕೇರಿಯಲ್ಲೂ ಹೀಗೆಯೇ ಆಗಿದೆ. ಗುತ್ತಿಗೆದಾರರನ್ನು ಕರೆದು ಕಟ್ಟುನಿಟ್ಟಿನ ಸೂಚನೆ ನೀಡಿ ಕೆಲಸ ಪೂರ್ಣಗೊಳಿಸಲು ಶಾಸಕರು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸೋಮವಾರ ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಮಂಗಳವಾರ ಕುಶಾಲನಗರ ಹಾಗೂ ಶುಕ್ರವಾರ ಮಡಿಕೇರಿಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಪ್ರಮುಖರಾದ ಕಿಬ್ಬೆಟ್ಟ ಧರ್ಮಪ್ಪ, ಎಸ್.ಆರ್. ಸೋಮೇಶ್, ಹರೀಶ್‌ಕುಮಾರ್, ಶರತ್‌ಚಂದ್ರ ಸೇರಿದಂತೆ ಇತರರು ಇದ್ದರು.