ಅರ್ಜಿ ವಿಲೇವಾರಿಗೆ ವಿಳಂಬ ಮಾಡಿದ್ರೆ ಶಿಸ್ತು ಕ್ರಮ: ಕಾಶಪ್ಪನವರ

KannadaprabhaNewsNetwork |  
Published : Oct 04, 2026, 03:00 AM IST
(ಫೋಟೊಬಿಕೆಟಿ12, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಶಪ್ಪನವರ ಅವರು  ಬೀಳಗಿ ತಹಶೀಲ್ದಾರ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಪ್ರಜಾಸೇವಾ ಅಂದೋಲ ಕಾರ್ಯಕ್ರಮ ಉದ್ಘಾಟಿಸಿದರು) | Kannada Prabha

ಸಾರಾಂಶ

ಬೀಳಗಿ ತಹಸೀಲ್ದಾರ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಪ್ರಜಾಸೇವಾ ಅಂದೋಲನ ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಶಪ್ಪನವರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಶಪ್ಪನವರ ಎಚ್ಚರಿಕೆ ನೀಡಿದರು.

ಬೀಳಗಿ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಪ್ರಜಾಸೇವಾ ಅಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸ್ಪಂದಿಸುವ ಕೆಲಸವಾಗಬೇಕು. ಅದಕ್ಕಾಗಿಯೇ ವಿವಿಧ ಇಲಾಖೆಗಳ ಸೇವೆಗಳು ನೇರವಾಗಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಂದ ವಿವಿಧ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅರ್ಜಿಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಸರ್ಕಾರ ನೇಗಿಲಯೋಗಿ, ಗ್ರಾಮ ಅನುಭವ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಬೀಳಗಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಕಾರ್ಯಕ್ರಮದಲ್ಲಿ ಕೇವಲ ಜನರ ಅಹವಾಲುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿದರೆ ಸಾಲದು. ನಿಗದಿತ ಅವಧಿಯಲ್ಲಿ ಅದಕ್ಕೆ ಪರಿಹಾರ ಒದಗಸುವ ಕೆಲಸವಾಗಬೇಕು. ಸಾರ್ವಜನಿಕರ ಕರೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಮಂಟೂರು ಮಹಾಲಕ್ಷ್ಮೀ ಯೋಜನೆಯಿಂದ ನೀರು ಬಿಟ್ಟರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ತಾಲೂಕಿನ ಕೆರೆಗಳು ತುಂಬಿಸುವ ಕೆಲಸವಾಗಬೇಕಿದೆ ಎಂದು ಸಚಿವರಿಗೆ ಕೇಳಿಕೊಂಡರು.

ನಂತರ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಸಂಚಾರಕ್ಕೆ ಸೂಚನೆ ನೀಡಿದರು, ವಿಜಯಪುರದಿಂದ ಹುಬ್ಬಳ್ಳಿಗೆ ಸಂಚರಿಸುವ ಬಸ್‌ಗಳು ಬೀಳಗಿ ಪಟ್ಟಣದೊಳಗೆ ಸಂಚರಿಸುವಂತೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಕೆನಾಲ್‌ ನೀರು ಬಿಡುಗಡೆಯಾಗದೆ ರೈತರಿಗೆ ತೊಂದರೆಯಾಗುತ್ತಿದೆ ಎಂಬ ರೈತರ ಅಹವಾಲಿನ ಹಿನ್ನೆಲೆ ಸ್ಥಳದಲ್ಲಿದ್ದ ಎಇಇ ಬಸವರಾಜ ಬಂಕಾಪೂರ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ಬರಗಾಲದಿಂದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನೀರಾವರಿ ಸೌಲಭ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ಕೆನಾಲ್‌ ಗೆ ನೀರು ಬಿಡುಗಡೆ ಮಾಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಸಮಿತಿಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ಡಿಸಿ ಸಂಗಪ್ಪ, ಎಸ್.ಪಿ ಸಿದ್ದಾರ್ಥ ಗೋಯಲ್, ಡಿಎಫ್.ಒ ಸ್ವಪ್ನಿಲ್ ಅಹಿರೇ, ಜಿಪಂ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿ ಇತರರು ಉಪಸ್ಥಿತರಿದ್ದರು.

300ಕ್ಕೂ ಅಧಿಕ ಅರ್ಜಿಗಳು ಸ್ವೀಕೃತ: ಸಭೆಯಲ್ಲಿ ರೈತರ ಸಮಸ್ಯೆಗಳು, ಅಂಗವಿಕಲರ ಅಹವಾಲುಗಳು, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳು, ಆಶ್ರಯ ಮನೆಗಳಿಗೆ ಸಂಬಂಧಿಸಿದ ವಿಚಾರಗಳು ಸೇರಿ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. 300ಕ್ಕೂ ಅಧಿಕ ಅರ್ಜಿಗಳು ಸ್ವೀಕೃತಗೊಂಡಿದ್ದವು.

ಕೆಲವು ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಂಡ ಸಚಿವರು, ಇನ್ನು ಕೆಲವು ಪ್ರಕರಣಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಕಾಲಮಿತಿಯಲ್ಲಿ ಬಗೆಹರಿಸುವಂತೆ ಸೂಚಿಸಿದರು. ನಿಗದಿತ ಅವಧಿಯಲ್ಲಿ ಸಮಸ್ಯೆಗಳನ್ನು ಪರಿಹರಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕಾಶಪ್ಪನವರ ಖಡಕ್ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ
ಭ್ರಷ್ಟರ ಕೈಯಲ್ಲಿ ಸಿಕ್ಕು ಕಸಾಪ ಸಂಸ್ಥೆಯ ನೈತಿಕತೆ ಹಾಳು: ಪ್ರೊ.ಎಸ್.ಜಿ.ಸಿದ್ದರಾಮಯ್ಯ