ನೀರಿನ ಮೂಲ ಗುರುತಿಸದೆ ಕಾಮಗಾರಿ ಕೈಗೊಂಡರೆ ಶಿಸ್ತು ಕ್ರಮ : ಕೋಟಾ ಶ್ರೀನಿವಾಸ್‌ ಪೂಜಾರಿ

KannadaprabhaNewsNetwork | Published : Feb 15, 2025 12:30 AM

ಸಾರಾಂಶ

ಚಿಕ್ಕಮಗಳೂರು, ಜಲ್ ಜೀವನ್ ಮಿಷನ್ ಯೋಜನೆಯಡಿ ಮೊದಲು ನೀರಿನ ಮೂಲವನ್ನು ಗುರುತಿಸದೆ ಪೈಪ್‌ಲೈನ್, ಟ್ಯಾಂಕ್ ನಿರ್ಮಾಣ ಇನ್ನಿತರೆ ಕಾಮಗಾರಿಗಳನ್ನು ಕೈಗೊಂಡರೆ ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಪಟ್ಟ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.

ಜಲ್ ಜೀವನ್ ಮಿಷನ್ ಯೋಜನೆ, ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಸಂವಾದ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಲ್ ಜೀವನ್ ಮಿಷನ್ ಯೋಜನೆಯಡಿ ಮೊದಲು ನೀರಿನ ಮೂಲವನ್ನು ಗುರುತಿಸದೆ ಪೈಪ್‌ಲೈನ್, ಟ್ಯಾಂಕ್ ನಿರ್ಮಾಣ ಇನ್ನಿತರೆ ಕಾಮಗಾರಿಗಳನ್ನು ಕೈಗೊಂಡರೆ ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಪಟ್ಟ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.ಶುಕ್ರವಾರ ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮ ಪ್ರತಿನಿಧಿಗಳ ಸಂವಾದದಲ್ಲಿ ಮಾತನಾಡಿದರು. ಬಹಳಷ್ಟು ಕಡೆ ನೀರಿನ ಮೂಲವೇ ಇಲ್ಲದಿದ್ದರೂ ಪೈಪ್‌ಲೈನ್ ಕಾಮಗಾರಿ ಮಾಡಿ, ನಲ್ಲಿಗಳನ್ನೂ ಅಳವಡಿಸಲಾಗಿದೆ. ಕಾಮಗಾರಿ ಬಿಲ್ ಪಾವತಿ ಆಗಿದ್ದರೂ ನೀರು ಮಾತ್ರ ಪೂರೈಕೆ ಆಗುತ್ತಿಲ್ಲ ಎನ್ನುವ ದೂರುಗಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯೋಜನೆ ಆರಂಭಿಸುವ ಮುನ್ನ ಗ್ರಾಮ ಪಂಚಾಯ್ತಿ ಗಮನಕ್ಕೆ ತರಬೇಕು. ಇಂಜಿನೀಯರುಗಳು ಹೇಳಿದ ರೀತಿ ಗುತ್ತಿಗೆದಾರರು ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ನೀರಿನ ಮೂಲವನ್ನು ಮೊದಲು ಖಾತ್ರಿಪಡಿಸಿಕೊಂಡು ಉಳಿದೆಲ್ಲ ಕಾಮಗಾರಿ ಕೈಗೊಳ್ಳಬೇಕು ಇಲ್ಲವಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ. 24 ಜನರಿಗೆ ಸಬ್ಸಿಡಿ:

ತಳಮಟ್ಟದ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಕೇಂದ್ರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ 4500 ಮಂದಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗಿದೆ. ಟೈಲರಿಂಗ್ ತರಬೇತಿಗೆಂದೇ 19 ಸಾವಿರ ಅರ್ಜಿಗಳು ಬಂದಿವೆ. ಅವರಲ್ಲದೆ ಇತರೆ ಕುಲಕಸುಬುದಾರರಿಗೂ ತರಬೇತಿ ಹಾಗೂ ಸಾಲಸೌಲಭ್ಯಗಳಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನಮ್ಮ ರಾಜ್ಯದಲ್ಲಿ ಉಚಿತ್ ವಿದ್ಯುತ್‌ನ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ ಕೇಂದ್ರದ ಸೂರ್ಯಘರ್ ಯೋಜನೆಯಡಿ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳುವ ಸಬ್ಸಿಡಿ ಯೋಜನೆಗೆ ಬೇಡಿಕೆ ಕಡಿಮೆ ಇದೆ. ಗೃಹ ಜ್ಯೋತಿ ಯಿಂದ ಹೊರಗಿರುವ ಸುಮಾರು 19 ಸಾವಿರ ಕುಟುಂಬಗಳಿವೆ ಅಂತಹವರಿಗೆ ₹2 ಲಕ್ಷ ಸಾಲ, ₹78 ಸಾವಿರ ಸಬ್ಸಿಡಿ ನೀಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ 312 ಜನರ ಮನೆಗಳಿಗೆ ರೂಫ್ ಅಳವಡಿಸುವ ಕೆಲಸ ಆಗುತ್ತಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 24 ಜನರಿಗೆ ಮೊದಲ ಹಂತದ ಸಬ್ಸಿಡಿ ಬಂದಿದೆ ಎಂದು ಹೇಳಿದರು.ಬಿಎಸ್‌ಎನ್‌ಎಲ್ ಆಯ್ಕೆ:ತಾವು ಸಂಸದರಾದ ನಂತರ ಕೇಂದ್ರ ಸರ್ಕಾರ ರಾಜ್ಯದ ಬಿಎಸ್‌ಎನ್‌ಎಲ್‌ಗೆ 97 ಬ್ಯಾಟರಿಗಳನ್ನು ಪೂರೈಸಿದೆ. ಅದರಲ್ಲಿ 52 ಬ್ಯಾಟರಿಗಳು ಚಿಕ್ಕಮಗಳೂರು ಜಿಲ್ಲೆಗೆ ಬಂದಿವೆ. 28 ಹೊಸ ಟವರ್‌ಗಳು ಮಂಜೂರಾಗಿವೆ. ಈ ಪೈಕಿ 25 ಕ್ಕೆ ಜಿಲ್ಲಾಧಿಕಾ ರಿಗಳು ಸ್ಥಳ ನೀಡಿದ್ದಾರೆ. 19 ಟವರ್ ನಿರ್ಮಾಣ ಪೂರ್ಣಗೊಂಡಿದೆ. ಈ ಪೈಕಿ 16 ಟವರ್‌ಗಳಿಗೆ 4ಜಿ ಸಂಪರ್ಕ ನೀಡಲಾಗಿದೆ. ಉಳಿದವರು ಪ್ರಗತಿಯಲ್ಲಿದೆ, 3 ಟವರ್‌ಗಳ ಅಳವಡಿಕೆಗೆ ಜಾಗ ಮಂಜೂರಾಗಬೇಕಿದೆ ಎಂದು ವಿವರಿಸಿದರು.ಇದಲ್ಲದೆ 43 ಹೊಸ ಟವರ್‌ಗಳಿಗೆ ಸ್ಥಳ ಗುರುತಿಸುವ ಕೆಲಸ ಆಗುತ್ತಿದೆ. ಎಲ್ಲ ಟವರ್‌ಗಳನ್ನು 4ಜಿಗೆ ಉನ್ನತೀಕರಿಸುವ ಕೆಲಸ ಆಗುತ್ತಿದೆ. ಈಗಾಗಲೇ 159 ಟವರ್‌ಗಳಿಗೆ ಸಲಕರಣೆಗಳು ಪೂರೈಕೆಯಾಗಿದೆ. 126 ಟವರ್‌ಗಳಿಗೆ 4ಜಿ ಸಂಪರ್ಕ ಕಲ್ಪಿಸ ಲಾಗಿದೆ ಎಂದು ತಿಳಿಸಿದರು.ಹೊರನಾಡಿನಲ್ಲಿ ಒಂದು ಟವರ್‌ಗೆ ಸ್ಯಾಟಲೈಟ್ ಸಂಪರ್ಕ ನೀಡಲಾಗಿದೆ. ಜಿಲ್ಲೆ ನಕ್ಸಲ್‌ ಪೀಡಿತವಾಗಿರುವುದರಿಂದ ಬಿಎಸ್‌ಎನ್‌ಎಲ್ ಸಂಪರ್ಕ ಜಾಲ ಬಲಪಡಿಸುವ ಸಲುವಾಗಿ ಎಲ್ಲಾ ಟವರ್‌ಗಳಿಗೆ ಸ್ಯಾಟಲೈಟ್ ಸಂಪರ್ಕ ಕಲ್ಪಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದರು.ಇತ್ತೀಚೆಗೆ ಬಿಎಸ್‌ಎನ್‌ಎಲ್‌ನಿಂದ ಏರ್‌ಟೆಲ್, ಜಿಯೋ ಇನ್ನಿತರೆ ಸಂಪರ್ಕಕ್ಕೆ ಜಿಗಿಯುತ್ತಿರುವವರ ಸಂಖ್ಯೆ ಕಡಿಮೆ ಆಗಿದೆ. ಬದಲಿಗೆ ಪ್ರತಿದಿನ ಸುಮಾರು 100 ಮಂದಿ ಬೇರೆ ಕಂಪನಿಗಳಿಂದ ಹೊರಬಂದು ಬಿಎಸ್‌ಎನ್‌ಎಲ್ ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೆ ಎಂದರು.ರೈಲ್ವೇ ಸಚಿವರಿಗೆ ಅಭಿನಂದನೆ:ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಮಾರ್ಗಕ್ಕೆ ₹72 ಕೋಟಿ ಅನುದಾನ ಮೀಸಲಿಡ ಲಾಗಿದೆ. ಇದಕ್ಕಾಗಿ ರೈಲ್ವೇ ಸಚಿವರನ್ನು ಅಭಿನಂದಿಸುತ್ತೇವೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರಾತ್ರಿ ರೈಲಿಗೆ ಬೇಡಿಕೆ ಇಡಲಾಗಿದೆ. ಚಿಕ್ಕಮಗಳೂರಿನಿಂದ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ರೈಲು ಓಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿ ಸಿಗುವ ಭರವಸೆ ಇದೆ ಎಂದರು.ಚಿಕ್ಕಮಗಳೂರು - ಬೇಲೂರು ಹೆದ್ದಾರಿ ಅಭಿವೃದ್ಧಿ ಬಹು ಬೇಡಿಕೆಯದ್ದಾಗಿದ್ದು, ಈ ವಾರದಲ್ಲಿ ಹಾಸನದಿಂದ ಬೇಲೂರು ವರೆಗಿನ ಕಾಮಗಾರಿ ಆರಂಭವಾಗಲಿದೆ. ಚಿಕ್ಕಮಗಳೂರು-ಬೇಲೂರು ರಸ್ತೆ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್‌. ತಾರಾನಾಥ್‌ ಕಾರ್ಯಕ್ರಮ ನಿರೂಪಿಸಿದರು. ಎ.ಎನ್.ಮೂರ್ತಿ ಪ್ರಾರ್ಥಿಸಿದರು. ಸಿ.ಸುರೇಶ್ ಸ್ವಾಗತಿಸಿದರು.

14 ಕೆಸಿಕೆಎಂ 1ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸಂವಾದವನ್ನು ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಉದ್ಘಾಟಿಸಿದರು. ಪ್ರೆಸ್‌ ಕ್ಲಬ್ ಅಧ್ಯಕ್ಷ ಪಿ. ರಾಜೇಶ್‌, ಪ್ರಧಾನ ಕಾರ್ಯದರ್ಶಿ ಆರ್‌. ತಾರಾನಾಥ್‌, ಸಿ.ಡಿ. ಚಂದ್ರೇಗೌಡ ಇದ್ದರು.

Share this article