ಅಧಿಕಾರಿ ಹಂತದಲ್ಲಿ ಕಾಮಗಾರಿ ಬದಲಾಯಿಸಿದರೆ ಶಿಸ್ತು ಕ್ರಮ

KannadaprabhaNewsNetwork |  
Published : May 08, 2024, 01:08 AM IST
ಚಿತ್ರದುರ್ಗ ಮೂರನೇ ಪುಟದ ಬಾಟಂ  | Kannada Prabha

ಸಾರಾಂಶ

ಜಿಲ್ಲಾಧಿಕಾರಿ ವೆಂಕಟೇಶ್ ಖಡಕ್ ಎಚ್ಚರಿಕೆ । ಸಿಇಸಿಯಿಂದ ಕೆಎಂಇಆರ್‌ಸಿ ಕಾಮಗಾರಿಗಳ ಮೇಲ್ವಿಚಾರಣೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಧಿಕಾರಿಗಳ ಹಂತದಲ್ಲಿ ಯಾವುದೇ ಕಾರಣಕ್ಕೂ ಯೋಜನೆ ಅಥವಾ ಕಾಮಗಾರಿ ಬದಲಾಯಿಸಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಮಗಾರಿ ಬದಲಾವಣೆ ಮಾಡಿದರೆ ಗಂಭೀರ ಲೋಪ ಎಂದು ಪರಿಗಣಿಸಲಾಗುವುದು ಎಂದರು. ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ (ಸಿಇಪಿಎಂಐಝಡ್)ಯಡಿ ಅನುಮೋದನೆಗೆ ಬಾಕಿ ಇರುವ ಕಾಮಗಾರಿಗಳ ವಿಸ್ತೃತ ಯೋಜನಾ ವರದಿ ಶೀಘ್ರವೇ ಸಿದ್ಧಪಡಿಸಿ ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮಕ್ಕೆ (ಕೆಎಂಇಆರ್‌ಸಿ) ಸಲ್ಲಿಸಬೇಕು. ಸುಪ್ರಿಂ ಕೋರ್ಟ್‍ನಿಂದ ಸ್ಥಾಪಿತವಾಗಿರುವ ಸೆಂಟ್ರಲ್ ಎಂಪವರ್ ಕಮಿಟಿ (ಸಿಇಸಿ) ಈ ಎಲ್ಲಾ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಲಿದೆ. ಯಾವುದೇ ರೀತಿಯ ಲೋಪವಾಗದಂತೆ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದರು.

ಕಾಮಗಾರಿಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳದ ಫೋಟೋ ಮತ್ತು ವೀಡಿಯೊಗ್ರಫಿ ಮಾಡಿ ಇಟ್ಟುಕೊಳ್ಳಬೇಕು. ಪೂರ್ಣಗೊಂಡ ನಂತರವೂ ಫೋಟೋ ಮತ್ತು ವೀಡಿಯೊಗ್ರಫಿಯ ದಾಖಲೆಗಳ ಕಾಯ್ದಿರಿಸಬೇಕು. ಕಾಮಗಾರಿ ವೇಳೆ ಯಾವುದೇ ರೀತಿಯ ಸಂದೇಹಗಳು ಕಂಡುಬಂದರೆ, ಕೆಎಂಇಆರ್‌ಸಿಯಿಂದ ಸೂಕ್ತ ನಿರ್ದೇಶನ ಪಡೆದು ಕಾಮಗಾರಿ ಆರಂಭಿಸಬೇಕು. ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ತಲೆದೊರುವುದಿಲ್ಲ. ಯಾವುದೇ ಕಾರಣಕ್ಕೂ ಯೋಜನೆಗಳನ್ನು ಹಗುರವಾಗಿ ಕಾಣಬೇಡಿ. ಯೋಜನೆ ಬದಲಾವಣೆಗೆ ಜನಪ್ರತಿನಿಧಿಗಳಿಂದ ಒತ್ತಡ ಕೇಳಿ ಬಂದರೆ, ಜನಪ್ರತಿನಿಧಿಗಳಿಗೆ ತಿಳಿ ಹೇಳಿ, ಇಲ್ಲವಾದರೆ ಅವರ ಅಹವಾಲುಗಳನ್ನು ಕೆಎಂಇಆರ್‌ಸಿಗೆ ಸಲ್ಲಿಸಿ ಎಂದು ವೆಂಕಟೇಶ್ ಹೇಳಿದರು.

ಜಿಲ್ಲೆಯ ಡಿಎಂಎಫ್ ಹಾಗೂ ಕೆಎಂಇಆರ್‌ಸಿ ಕಾಮಗಾರಿಗಳ ಮೇಲ್ವಿಚಾರಣೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗುವುದು. ಪ್ರತಿ ವಾರಕೊಮ್ಮೆ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಕಾಮಗಾರಿಗಳ ಅತಿಕ್ರಮಣವಾಗಬಾರದು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಲೋಕೋಪಯೋಗಿ, ಸಣ್ಣ ನೀರಾವರಿ, ತೋಟಗಾರಿಕೆ, ಕೌಶಲಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಅರಣ್ಯ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಮುಖ್ಯ ಯೋಜನಾಧಿಕಾರಿ ಸತೀಶ್‍ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಓ.ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ