ಸ.ಪ್ರ.ದ. ಕಾಲೇಜಿನಲ್ಲಿ ಬಿಕಾಂ ಓರಿಯಂಟೇಶನ್, ಯುವ ಪರ್ವ ಕಾರ್ಯಕ್ರಮಕ್ಕೆ ಚಾಲನೆ
ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯ ಪರಿಪಾಲನೆ ಮತ್ತು ಸದಾ ಪ್ರಯತ್ನಶೀಲರಾಗಿರಬೇಕು. ಕೇವಲ ಅಂಕಗಳಿಕೆಗೆ ಆದ್ಯತೆ ನೀಡದೆ, ಮೌಲ್ಯಾಧಾರಿತ, ಅಧ್ಯಯನಪೂರ್ಣ ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಆರ್.ಎಚ್. ರಮೇಶ ಹೇಳಿದರು.
ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕದಂಬ ವೈಭವ ಸಭಾಂಗಣದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಪ್ರಸಕ್ತ ಸಾಲಿನ ಬಿಕಾಂ ಪ್ರಥಮ ವರ್ಷದ ನೂತನ ವಿದ್ಯಾರ್ಥಿಗಳನ್ನು ಸ್ವಾಗತ ಕೋರಿ ಆಯೋಜಿಸಿದ ಓರಿಯಂಟೇಶನ್ ಕಾರ್ಯಕ್ರಮ ಹಾಗೂ ಯುವ ಪರ್ವವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ್ ಮಾತನಾಡಿ, ನಮ್ಮ ಕಾಲೇಜು ಕೇವಲ ಪಠ್ಯ ಬೋಧನೆಗೆ ಸೀಮಿತವಾಗಿರದೆ, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಲು ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ ವೇದಿಕೆ, ಎನ್.ಎಸ್.ಎಸ್., ಯೂತ್ ರೆಡ್‌ಕ್ರಾಸ್‌ನಂತಹ ಹಲವು ತರಬೇತಿ ವೇದಿಕೆ ಲಭ್ಯವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಪಟ್ಟಿ ಅಥವಾ ಪದವಿ ಪ್ರಮಾಣಪತ್ರ ಮಾತ್ರ ಸಾಲದು. ಬದಲಾಗಿ ವೃತ್ತಿಪರ ಕೌಶಲಗಳು, ಕಮ್ಯುನಿಕೇಶನ್ ಮತ್ತು ಕಠಿಣ ಪರಿಶ್ರಮ ಅತಿಮುಖ್ಯ. ವಾಣಿಜ್ಯ ಕ್ಷೇತ್ರವು ದಿನದಿಂದ ದಿನಕ್ಕೆ ಜಾಗತಿಕವಾಗಿ ವಿಸ್ತರಿಸುತ್ತಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಂತ್ರಜ್ಞಾನ ಹಾಗೂ ಡಿಜಿಟಲ್ ಯುಗದ ಬದಲಾವಣೆಗಳಿಗೆ ತೆರೆದುಕೊಳ್ಳಬೇಕು. ಕಾಲೇಜಿನ ಸುಸಜ್ಜಿತ ಗ್ರಂಥಾಲಯ, ಇ-ರೈಸೋರ್ಸ್ ಹಾಗೂ ಅನುಭವಜ್ಞ ಉಪನ್ಯಾಸಕರ ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮಾಜಿ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಹೆಗಡೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಬಿಕಾಂ ವಿಭಾಗದ ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು. ವಿದ್ಯಾರ್ಥಿನಿಯರಾದ ವಿನುತಾ, ಶೃತಿ ಪ್ರಾರ್ಥಿಸಿದರು. ಭಾಗ್ಯಶ್ರೀ ಸ್ವಾಗತಿಸಿದರು. ಸಹನಾ ಗೌಡ ನಿರ್ವಹಿಸಿದರು. ಅಕ್ಷತಾ ಗೌಡ ವಂದಿಸಿದರು.