ಕೊಪ್ಪಳ: ಕನಕಗಿರಿ ಉತ್ಸವ 2024ರ ಅಂಗವಾಗಿ ಬುಧವಾರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಸಭಾಂಗಣದಲ್ಲಿ ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಭೆ ನಡೆಯಿತು.ಜಿಲ್ಲಾ ಸಾಂಖ್ಯಿಕ ಅಧಿಕಾರಿ ಹಾಗೂ ಪ್ರಚಾರ ಮತ್ತು ಮಾಧ್ಯಮ ಸಮಿತಿಯ ಅಧ್ಯಕ್ಷ ಸುಧಾಕರ ಮಾನೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವ್ಯಾಪಕ ಪ್ರಚಾರಕ್ಕಾಗಿ ಶಿಸ್ತುಬದ್ಧ ಯೋಜನೆ ರೂಪಿಸಲಾಯಿತು.2015ರ ನಂತರ ಕನಕಗಿರಿ ಉತ್ಸವ ನಡೆಯುತ್ತಿದೆ. ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಜನೋತ್ಸವ ಆಗಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ಆಶಯವಾಗಿದೆ. ಈ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಪ್ರಚಾರ ವ್ಯವಸ್ಥೆಯು ಪ್ರಚಾರ ಹಾಗೂ ಮಾಧ್ಯಮ ಸಮಿತಿಯಿಂದ ಆಗಬೇಕು ಎಂದು ಸಭೆಯಲ್ಲಿ ಅಧ್ಯಕ್ಷರು ತಿಳಿಸಿದರು.ಉತ್ಸವ ಹಿನ್ನೆಲೆಯಲ್ಲಿ ಕನಕಗಿರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಗೋಡೆ ಬರಹ ಮಾಡಿಸಲು, ಬಸ್ ನಿಲ್ದಾಣಗಳಲ್ಲಿ ಜಿಂಗಲ್ಸ್ ಮೂಲಕ ಪ್ರಚಾರ ನಡೆಸಲು, ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದರ ಬಗ್ಗೆ, ವೆಬ್ ಸೈಟ್ ರಚಿಸಿ ವಿಶೇಷ ಪ್ರಚಾರ ಮಾಡುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು.ಪ್ರತಿಯೊಂದು ಗ್ರಾಮದಲ್ಲಿ ಉತ್ಸವದ ಬಗ್ಗೆ ಪ್ರಚಾರವಾಗಲು ಶಾಲಾ ಮಕ್ಕಳಿಂದ ಪ್ರಭಾತ್‌ಪೇರಿ ನಡೆಸಿ ಪ್ರಚಾರ ಮಾಡಲು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಅವರು ತಿಳಿಸಿದರು.ವಾರ್ತಾ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಹೆದ್ದಾರಿ ಫಲಕಗಳ ಮೂಲಕವು ಸಹ ಪ್ರಚಾರ ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು.ಜಿಲ್ಲಾಡಳಿತ ಜಾಲತಾಣದಲ್ಲಿ ಕನಕಗಿರಿ ಉತ್ಸವಕ್ಕೆ ಸಂಬಂಧಿಸಿದ ಮಾಹಿತಿ ಅಳವಡಿಸಿ ಪ್ರಚಾರ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಪತ್ರಕರ್ತರಿಗೆ ಸುಸಜ್ಜಿತ ಮಾಧ್ಯಮ ಕೇಂದ್ರ ನಿರ್ಮಾಣ, ಮೀಡಿಯಾ ಸೆಂಟರಗೆ ಇಂಟರ್ನೆಟ್ ಸಂಪರ್ಕ, ಪತ್ರಕರ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಇನ್ನಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಮಿತಿಗೆ ಸೇರಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಎನ್.ಐ.ಸಿಯ ಅಧಿಕಾರಿ ವೀರಣ್ಣ ಏಳುಬಾವಿ, ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕರಾದ ಚಂದ್ರಪ್ಪ ಹಾಗೂ ಇನ್ನೀತರರು ಉಪಸ್ಥಿತರಿದ್ದರು.