ಕನ್ನಡಪ್ರಭ ವಾರ್ತೆ ವಿಜಯಪುರ
ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಪೂರ್ವದಲ್ಲಿ ಓವರ್ ಹೆಡ್ ಟ್ಯಾಂಕ್ ನ್ನು ಸ್ವಚ್ಛಗೊಳಿಸಿ, ಕ್ಲೋರಿನೇಷನ್ ಮಾಡಿ, ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಗ್ರಾಮಗಳಲ್ಲಿನ ಹಳೆಯ ಸಂಪರ್ಕಗಳನ್ನು ಕಡ್ಡಾಯವಾಗಿ ತೆರವುಗೊಳಿಸಿ ಜಲ ಜೀವನ್ ಮಿಷನ್ ಯೋಜನೆಯಡಿ ನೀಡಲಾದ ಹೊಸ ನಲ್ಲಿ ಸಂಪರ್ಕಗಳ ಮೂಲಕ ನೀರನ್ನು ಪೂರೈಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಸೂಚಿಸಿದರು.ತಾಲೂಕಿನ ಐನಾಪುರ, ಐನಾಪುರ.ಎಲ್.ಟಿ, ಬುರಣಾಪುರ, ಮದಭಾವಿ, ಕುಮಟಗಿ, ಕಗ್ಗೋಡ, ಕಗ್ಗೋಡ ಎಲ್‌ಟಿ, ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ, ಪಡಗಾನೂರ.ಎಲ್.ಟಿ, ಕೊಂಡಗೂಳಿ, ಹಂಚಲಿ ಮತ್ತು ಕೋರವಾರ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡ ಪ್ರತಿ ಮನೆಗಳ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ಜಲಮಿಷನ್ ಯೋಜನೆಯಡಿ ಪ್ರತಿ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಬೇಕು. ಪ್ರತಿನಿತ್ಯ ಮನೆ-ಮನೆಗೂ ಸಾಕಷ್ಟು ಪ್ರಮಾಣದ ನೀರನ್ನು ಸರಬರಾಜು ಮಾಡಬೇಕು ಎಂದು ಸೂಚಿಸಿದರು.ಗ್ರಾಮಗಳಲ್ಲಿನ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳಿಗೆ ನೀರಿನ ಸಂಪರ್ಕ ನೀಡಿರುವ ಕುರಿತು ಖಾತ್ರಿಪಡಿಸಿಕೊಂಡ ಅವರು ನೀರನ್ನು ಪೂರೈಕೆ ಮಾಡುವ ಪೂರ್ವದಲ್ಲಿ ನಿಯಮಿತವಾಗಿ ಎಫ್‌ಟಿಕೆ ಮೂಲಕ ಪರೀಕ್ಷಿಸಬೇಕು. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಯಾವುದೇ ಪರಿಸ್ಥಿತಿಯಲ್ಲಯೂ ಸಹ ನೀರು ಕಲುಷಿತವಾಗದಂತೆ ಎಚ್ಚರವಹಿಸಬೇಕು. ಬೋರ್‌ವೆಲ್ ಪಾಯಿಂಟ್‌ಗಳು ಮತ್ತು ವಾಲ್‌ಗಳು ಸ್ವಚ್ಛವಾಗಿರುವಂತೆ ನಿರ್ವಹಣೆ ಮಾಡಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಪ್ರತಿ ಮನೆಗೆ ನೀರು ಸರಿಯಾದ ಪ್ರಮಾಣದಲ್ಲಿ ಬರುವುದನ್ನು ಖಾತರಿಪಡಿಸಿಕೊಂಡು ನಂತರ ಅದನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಪ್ರತಿ ಮನೆ-ಮನೆಗಳಿಗೆ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಪಂಚಾಯತ ಅಭಿವೃಧ್ಧಿ ಅಧಿಕಾರಿ, ಶಾಖಾಧಿಕಾರಿಗಳು ಜಂಟಿಯಾಗಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ದೇವರ ಹಿಪ್ಪರಗಿ ತಾಪಂ ಇಒ ಭಾರತಿ ಚಲುವಯ್ಯ, ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರಾನಾಥ ರಾಠೋಡ, ಸಂತೋಷ ಪಾಟೀಲ, ಸೆಕ್ಷನ್ ಆಫೀಸರ್ ಹಣಮಂತ ಸಾರವಾಡ, ಶಾಖಾಧಿಕಾರಿ ಶಿವಪುತ್ರಪ್ಪ ಮಾನಶೆಟ್ಟಿ, ಮದಭಾವಿ ಪಿಡಿಒ ಎಸ್.ಆರ್ ಕಟ್ಟಿ, ಕುಮಟಗಿ ಪಿಡಿಒ ರೇಖಾ ಪವಾರ, ಕೋರವಾರ ಪಿಡಿಒ ಅಧಿಕಾರಿ ಕಾಶಿನಾಥ ಕಡಕಬಾವಿ, ಕೊಂಡಗೂಳಿ ಪಿಡಿಒ ಅಧಿಕಾರಿ ಅಕ್ಕಮಹಾದೇವಿ ಅಂಗಡಿ, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಹಾಗೂ ಗ್ರಾಮದ ಜನಪ್ರತಿನಿಧಿಗಳು ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.