ಸುತ್ತೂರು ಕ್ಷೇತ್ರದಲ್ಲಿ ಶ್ರಾವಣಮಾಸದ 9ನೇ ದಿನದ ಪ್ರವಚನ

KannadaprabhaNewsNetwork |  
Published : Aug 03, 2025, 01:30 AM IST
50 | Kannada Prabha

ಸಾರಾಂಶ

ಮೃದು ವಚನವೇ ಸಕಲ ಜಪಂಗಳಯ್ಯ ಮೃದು ವಚನವೇ ಸಕಲ ತಪಂಗಳಯ್ಯ ಮಾತೇ ಮುತ್ತು, ಮಾತೇ ಮೃತ್ಯು ಎಂಬಂತೆ ಸ್ವರ್ಗ ನರಕಗಳನ್ನು ನಮ್ಮ ಮಾತಿನಿಂದಲೇ ಸೃಷ್ಟಿಸಬಹುದು. ಮಾತು ಮುತ್ತಿನ ಹಾರದಂತೆ ಸರಳ, ಸುಂದರ, ಶುಭ್ರವಾಗಿದ್ದು, ಮಾಣಿಕ್ಯ ದೀಪ್ತಿಯಂತೆ ದಾರಿದೀಪವಾಗಿದ್ದು, ಸ್ಫಟಿಕದಂತೆ ಸುಸ್ಪಷ್ಟವಾದಾಗ ಮಾತ್ರ ಭಗವಂತನು ಮೆಚ್ಚಿ ತಲೆದೂಗುತ್ತಾನೆಂದು ಬಸವಣ್ಣನವರು ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಸುತ್ತೂರುಮಾತಿನಿಂದಲೇ ಇಹವು ಮಾತಿನಿಂದಲೇ ಪರವು ಎಂದು ಎಚ್.ಬಿ. ದೇವಣ್ಣ ಹೇಳಿದರು.ಶ್ರೀ ಕ್ಷೇತ್ರದಲ್ಲಿ ಶ್ರಾವಣ ಮಾಸದ 9ನೇ ದಿನದ ಪ್ರವಚನದಲ್ಲಿ ಅವರು ತಿಳಿಸಿದರು.ಮಾತಿನಿಂದಲೇ ಈ ಲೋಕದಲ್ಲಿ ಎಲ್ಲವೂ ಸಾಧ್ಯ. ಒಳ್ಳೆಯ ಮಾತುಗಳಿಂದ ಜನರು ಒಟ್ಟಾಗಿ ಬಾಳುತ್ತಾರೆ, ಕೆಟ್ಟ ಮಾತುಗಳಿಂದ ಜಗಳಗಳುಂಟಾಗಿ ಬೇರ್ಪಡುತ್ತಾರೆ. ಒಳ್ಳೆಯ ಮಾತುಗಳಿಂದ ಪುಣ್ಯ ಬರುತ್ತದೆ, ಕೆಟ್ಟ ಮಾತುಗಳಿಂದ ಪಾಪ ಬರುತ್ತದೆ.ಮಾತಿನಿಂದಲೇ ಸರ್ವ ಸಂಪದವು. ಜಗದೊಳಗೆ ಒಳ್ಳೆಯ ಮಾತುಗಳಿಂದ ಜಗತ್ತಿನಲ್ಲಿ ಎಲ್ಲ ಸುಖ-ಸಂತೋಷಗಳು ದೊರೆಯುತ್ತವೆ. ಮಾತೇ ಮಾಣಿಕ್ಯ. ಮಾತು ಅಮೂಲ್ಯವಾದ ವಜ್ರದಂತೆ. ಅದನ್ನು ಎಚ್ಚರಿಕೆಯಿಂದ ಬಳಸಬೇಕು. ಪ್ರಾಣಿ ಜಗತ್ತಿನಿಂದ ತಾನು ಪ್ರತ್ಯೇಕ ಎಂದು ತೋರಿಸುವ ಒಂದು ಪ್ರಮುಖ ಮನುಷ್ಯ ಲಕ್ಷಣವೆಂದರೆ "ಮಾತು ".ತನ್ನ ಮುಪ್ಪೊದಗದ, ಹರಿತವಾದ ನಾಲಿಗೆಯಿಂದ ಮನುಷ್ಯ ಶತ್ರುಗಳನ್ನು, ಮಿತ್ರರನ್ನು ಸೃಷ್ಟಿಸಿಕೊಳ್ಳುತ್ತಾನೆ. ಮಾತಿನಿಂದಲೇ ಮನೆಯನ್ನು ಕಟ್ಟಬಹುದು, ಮಸಣವನ್ನೂ ನಿರ್ಮಿಸಬಹುದು ಎಂದು ಅಲ್ಲಮ್ಮ ಪ್ರಭುಗಳು ಮಾತೆಂಬುದು ಜ್ಯೋತಿರ್ಲಿಂಗ ಎಂದು ಮಾತನ್ನು ಆ ಭಗವಂತನಿಗೇ ಹೋಲಿಸಿದ್ದಾರೆ. ಮಾತನ್ನು ಬಹಳ ಭಯ, ಭಕ್ತಿ, ಗೌರವಾದರಗಳಿಂದ ಆಡಬೇಕೆಂದು ತಿಳಿಸಿದ್ದಾರೆ. ಬಸವಣ್ಣನವರು ಮನುಷ್ಯನಿಗೆ ಬೇರೆಲ್ಲ ಜಪ-ತಪಗಳಿಗಿಂತಲೂ ಮೃದುವಚನವೇ ಶ್ರೇಷ್ಠವೆಂದು ಹೇಳಿದ್ದಾರೆ. ಮೃದು ವಚನವೇ ಸಕಲ ಜಪಂಗಳಯ್ಯ ಮೃದು ವಚನವೇ ಸಕಲ ತಪಂಗಳಯ್ಯ ಮಾತೇ ಮುತ್ತು, ಮಾತೇ ಮೃತ್ಯು ಎಂಬಂತೆ ಸ್ವರ್ಗ ನರಕಗಳನ್ನು ನಮ್ಮ ಮಾತಿನಿಂದಲೇ ಸೃಷ್ಟಿಸಬಹುದು. ಮಾತು ಮುತ್ತಿನ ಹಾರದಂತೆ ಸರಳ, ಸುಂದರ, ಶುಭ್ರವಾಗಿದ್ದು, ಮಾಣಿಕ್ಯ ದೀಪ್ತಿಯಂತೆ ದಾರಿದೀಪವಾಗಿದ್ದು, ಸ್ಫಟಿಕದಂತೆ ಸುಸ್ಪಷ್ಟವಾದಾಗ ಮಾತ್ರ ಭಗವಂತನು ಮೆಚ್ಚಿ ತಲೆದೂಗುತ್ತಾನೆಂದು ಬಸವಣ್ಣನವರು ನುಡಿದಿದ್ದಾರೆ. ಮಾತು ಮಂತ್ರವಾಗುವುದು, ದೈವವಾಗುವುದು. ಅದನ್ನುಯಾರು ಆಡುತ್ತಾರೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ತ್ರಿಕರಣ ಶುದ್ಧಿಯಿಂದ ಕ್ರಿಯಾಶೀಲ ಚೇತನಗಳು ಆಡುವ ಮಾತಿಗೆ ಈ ಶಕ್ತಿಯಿರುತ್ತದೆ. ಅನವಶ್ಯ ಮಾತುಗಳು ದುಂದುವೆಚ್ಚದಂತೆ.ಏನೂ ಪ್ರಯೋಜನವಿಲ್ಲ. ಮಾತನಾಡುವ ಮುನ್ನ ಯೋಚಿಸಿ ಮಾತನಾಡುವುದನ್ನು ರೂಡಿಸಿಕೊಳ್ಳಬೇಕು. ಮೃದು, ಮಧುರ ಹಿತನುಡಿಗಳನ್ನು ಆಡಬೇಕೆಂದು ತಿಳಿಸಿದರು.ಭಕ್ತಾದಿಗಳು ಮತ್ತು ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ