ಸೋಮರಡ್ಡಿ ಅಳವಂಡಿ ಕೊಪ್ಪಳ
ವಾರ್ಷಿಕವಾಗಿ ಕೊಪ್ಪಳ ಜಿಲ್ಲೆಗೆ ಬರೋಬ್ಬರಿ 54 ಲಕ್ಷ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ ಎನ್ನುವ ಪ್ರವಾಸೋದ್ಯಮ ಇಲಾಖೆಯ ಅಂಕಿ, ಸಂಖ್ಯೆ ಹಾಗೂ ಅದರಲ್ಲೂ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿರುವ ಸ್ಥಳಗಳು ಇರುವುದರಿಂದ ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದ್ದು, ಅವುಗಳನ್ನೊಳಗೊಂಡು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಕೊಪ್ಪಳ ಅನ್ವೇಷಿಸಿ ಎನ್ನುವ ಕೊಪ್ಪಳ ಪ್ರವಾಸಿ ತಾಣಗಳ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ಜ.21 ರಿಂದ ಜ.23ವರೆಗೂ ಕೊಪ್ಪಳ ಅನ್ವೇಷಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಇದಕ್ಕೆ ಕೊಪ್ಪಳ ಹೋಟೆಲ್ ಮಾಲಿಕರ ಸಂಘ, ವಿಶ್ವ ಪ್ರಸಿದ್ಧ ಬ್ಲಾಗರ್ಸ್, ಇನ್‌ಫ್ಲುಯೇನ್ಸರ್, ಟೂರ್ ಆಪರೇಟರ್ ಸಹ ಆಗಮಿಸಲಿದ್ದು, ಕೊಪ್ಪಳ ಜಿಲ್ಲೆಯ ಪ್ರವಾಸಿತಾಣಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಹೊಸ ದಿಕ್ಸೂಚಿ:ಕೊಪ್ಪಳ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದ್ದು, ಇಲ್ಲಿಯ ಅಂಜನಾದ್ರಿ ಬೆಟ್ಟ, ಹಿರೇಬೆಣಕಲ್ ಶಿಲಾಸಮಾಧಿಗಳು, ಹುಲಿಗೆಮ್ಮದೇವಸ್ಥಾನ, ಆನೆಗೊಂದಿ, ಆನೆಗೊಂದಿ ಸುತ್ತಮುತ್ತ ಇರುವ ರಾಮಾಯಣ, ಮಹಾಭಾರತದ ಐತಿಹ್ಯಗಳು, ದೇವಾಲಯಗಳ ಚಕ್ರವರ್ತಿ ಇಟಗಿಯ ಮಹದೇವ ದೇವಾಲಯ ಸೇರಿದಂತೆ ವಿಶ್ವವನ್ನೇ ಬೆರೆಗುಗೊಳಿಸುವ ಸಾಕಷ್ಟು ಐತಿಹ್ಯಗಳು ಕೊಪ್ಪಳ ಜಿಲ್ಲೆಯಲ್ಲಿದ್ದು, ಅವುಗಳನ್ನು ನೋಡಲು ದೇಶದ ಮೂಲೆ ಮೂಲೆಯಿಂದ ಸೇರಿದಂತೆ ನಾನಾ ದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಈಗಾಗಲೇ ಆಗಮಿಸುತ್ತಿದ್ದಾರೆ. ಅತ್ಯಧಿಕ ಪ್ರವಾಸಿಗರನ್ನು ಕೆಬಿಸಿ ಕರೆಯುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಕೇಂದ್ರ ಪ್ರವಾಸೋಧ್ಯಮ ಮಂತ್ರಾಲಯ ಈಗ ಕೊಪ್ಪಳ ಅನ್ವೇಷಿಸಿ ಕಾರ್ಯಕ್ರಮ ಹೊಸ ದಿಕ್ಸೂಚಿ ನೀಡಲಿದೆ. ಇನ್ಮುಂದೆ ಇದಕ್ಕೊಂದು ಹೊಸರೂಪ ಬರಲಿದೆ. ಅಷ್ಟೇ ಅಲ್ಲ ವ್ಯಾಪಕ ಪ್ರಚಾರವೂ ಸಿಗಲಿದೆ.ಮೂಲಸೌಕರ್ಯ ಅಭಿವೃದ್ಧಿ:ಕೊಪ್ಪಳ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದಕ್ಕೇ ಪೂರಕವಾಗಿ ಮೂಲಭೂತ ಸೌಕರ್ಯಗಳ ಕೊರತೆಯೂ ದೊಡ್ಡದಾಗಿದೆ, ವಾಸ್ತವ್ಯ ಸೇರಿದಂತೆ ಅನೇಕ ರೀತಿಯ ಸಮಸ್ಯೆ ಇದ್ದು, ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಖಾಸಗಿಯವರನ್ನು ಆಹ್ವಾನಿಸಿ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಸಾಕಷ್ಟು ಯೋಜನೆ ರೂಪಿಸಲು ಇದರಿಂದ ಅನುಕೂಲವಾಗಲಿದೆ.
ಕೋಟಿ ಮೀರಿರುವ ಪ್ರವಾಸಿಗರ ಸಂಖ್ಯೆ:ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಅಂದಾಜು ಲೆಕ್ಕಾಚಾರದಲ್ಲಿ ಕಳೆದ ವರ್ಷ 54 ಲಕ್ಷ ಪ್ರವಾಸಿಗರು ಬಂದಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ, ವಾಸ್ತವದಲ್ಲಿ ಕೊಪ್ಪಳ ಜಿಲ್ಲೆಗೆ ಪ್ರತಿ ವರ್ಷವೂ ಕೋಟಿಗೂ ಅಧಿಕ ಸಂಖ್ಯೆಯ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಅಂಜನಾದ್ರಿ, ನವವೃಂದಾವನ, ಹಿರೇಬೆಣಕಲ್ ಶಿಲಾಸಮಾಧಿ, ಹುಲಿಗೆಮ್ಮ ದೇವಸ್ಥಾನ, ಗವಿಮಠ ಸೇರಿದಂತೆ ವಾರ್ಷಿಕವಾಗಿ ಬರೋಬ್ಬರಿ 1 ಕೋಟಿಗೂ ಅಧಿಕ ಪ್ರವಾಸಿಗರು ಬರುತ್ತಿದ್ದಾರೆ.ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದವರನ್ನು ನಾವೇ ಆಹ್ವಾನ ಮಾಡಿದ್ದೇವೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮದಲ್ಲಿ ವಿಪರೀತ ಅವಕಾಶ ಇರುವುದರಿಂದ ಮತ್ತು ಈಗಾಗಲೇ ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಪ್ರವಾಸೋದ್ಯಮದ ಮಂತ್ರಾಲಯದವರಿಗೆ ಇಲ್ಲಿಯ ವಿಶೇಷ ತಾಣ ಪರಿಚಯಿಸುವ ದಿಸೆಯಲ್ಲಿ ಆಹ್ವಾನಿಸಿದ್ದೇವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ತಿಳಿಸಿದ್ದಾರೆ.