ಧಾರವಾಡ:
ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಉದ್ಘಾಟಿಸಿದ ಅವರು, ವೇಮನರು ಸಾರಿದ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಹಾಗೂ ವೈಚಾರಿಕ ಚಿಂತನೆಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಅವುಗಳನ್ನು ಅಧ್ಯಯನ, ಸಂಶೋಧನೆ ಮತ್ತು ಜನಪ್ರಿಯಗೊಳಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದರು. ವೇಮನ ಸಾಹಿತ್ಯದ ಸೃಷ್ಟಿ ಹಾಗೂ ಅದರ ವ್ಯಾಪಕ ಪ್ರಚಾರ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯಬೇಕು. ಕವಿವಿ ವೇಮನ ಅಧ್ಯಯನ ಪೀಠದ ವತಿಯಿಂದ ಈಗಾಗಲೇ 15 ಪುಸ್ತಕ ಪ್ರಕಟಿಸಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಒಟ್ಟು 40 ಪುಸ್ತಕ ಪ್ರಕಟಿಸುವ ಮೂಲಕ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆ ನೀಡಬೇಕಿದೆ. ವೇಮನರ ಜೀವನ ಚರಿತ್ರೆ ಆಧರಿಸಿದ ಸಿನಿಮಾವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವ ಮೂಲಕ ಅವರ ಜೀವನ ಮೌಲ್ಯಗಳನ್ನು ಎಲ್ಲ ವರ್ಗದ ಜನರಿಗೆ ತಲುಪಿಸುವ ಕಾರ್ಯವೂ ಅಗತ್ಯವಿದೆ ಎಂದು ಹೇಳಿದರು. ಈ ವೇಳೆ ಮಹಾಯೋಗಿ ವೇಮನ ಅಧ್ಯಯನ ಪೀಠದ ವತಿಯಿಂದ ಪ್ರಕಟಿಸಲಾದ ಹತ್ತು ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಬಸವರಡ್ಡಿ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಶಶಿಕಲಾ ಬಸವರಡ್ಡಿ ವಿಶೇಷ ಉಪನ್ಯಾಸ ನೀಡಿದರು. ಕವಿವಿ ಕುಲಸಚಿವ ಡಾ. ಶಂಕರ ವನಕ್ಯಾಳ, ವಕೀಲರಾದ ವಿ.ಡಿ. ಕಾಮರಡ್ಡಿ, ಕೆ.ಎಲ್. ಪಾಟೀಲ, ನಿವೃತ್ತ ಅಧೀಕ್ಷಕ ಅಭಿಯಂತರ ರಮೇಶ ಜಂಗಲ್, ವೆಂಕಟೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಅಜ್ಜಣ್ಣ ಅಳಗವಾಡಿ ಇದ್ದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಮಹಾಯೋಗಿ ವೇಮನ ಪೀಠದ ಸಂಯೋಜಕ ಡಾ. ಎಚ್.ಬಿ. ನೀಲಗುಂದ ಪ್ರಾಸ್ತಾವಿಕ ಮಾತನಾಡಿದರು.