- ಮಿನಿ ಡ್ಯಾಂ ನಿರ್ಮಾಣಕ್ಕೆ 5 ಕಿಮೀ ಕಾಡು ಹಾದಿ ಕ್ರಮಿಸಿದ ಶಾಸಕ, ಡಿಸಿ, ಜಿಪಂ ಸಿಇಒ, ಡಿಎಫ್‌ಒ, ನೀರಾವರಿ ಎಇಇ - ಮಾಯಕೊಂಡ ಬಳಿ ಪತ್ತೆಯಾದ ಐತಿಹಾಸಿಕ ಕೆರೆ ಕಾಯಕಲ್ಪಕ್ಕೆ ಟೊಂಕಕಟ್ಟಿ ನಿಂತ ಶಾಸಕ ಕೆ.ಎಸ್. ಬಸವಂತಪ್ಪ
- - - ಕನ್ನಡಪ್ರಭ ವಾರ್ತೆ ದಾವಣಗೆರೆಚಿತ್ರದುರ್ಗದ ಪಾಳೇಗಾರರ ಕಾಲಕ್ಕೆ ಸೇರಿದ, ನಾಪತ್ತೆಯಾಗಿದ್ದ ಬುಳ್ಳಾಪುರ ಕೆರೆ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಅಂತಹ ಐತಿಹಾಸಿಕ ಕೆರೆಯನ್ನು ಅಭಿವೃದ್ಧಿಪಡಿಸಿ, ಜೀರ್ಣೋದ್ಧಾರ ಮಾಡುವ ನಿಟ್ಟಿನಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್, ಅರಣ್ಯಾಧಿಕಾರಿಗಳ ಸಮೇತ ಸೋಮವಾರ ಸ್ಥಳ ಪರಿಶೀಲಿಸಿದರು.
ದಾವಣಗೆರೆ ತಾಲೂಕಿನ ಬುಳ್ಳಾಪುರ ಗ್ರಾಮದ ಹೊರವಲಯದಲ್ಲಿ ಕಾಡಿನಲ್ಲಿ ಗುಡ್ಡಗಳ ಮಧ್ಯೆ ಇರುವಂತಹ ಐತಿಹಾಸಿಕ ಬುಳ್ಳಾಪುರ ಕೆರೆ ಚಿತ್ರದುರ್ಗ ಪಾಳೇಗಾರರ ಕಾಲದಲ್ಲಿ ನಿರ್ಮಿಸಿದ್ದ, ಮಳೆಯ ನೀರು ಒಂದು ಕಡೆ ಸಂಗ್ರಹಗೊಳ್ಳುವಂತಹ ಸ್ಥಳವಾಗಿದೆ. ಇತ್ತೀಚೆಗಷ್ಟೇ ಇಂಥದ್ದೊಂದು ಕೆರೆ ಇರುವ ವಿಚಾರ ಗೊತ್ತಾದ ಹಿನ್ನೆಲೆ ನಾಲ್ಕೈದು ಸಲ ಅಲ್ಲಿಗೆ ಭೇಟಿ ನೀಡಿ, ವೀಕ್ಷಿಸಿದ್ದ ಶಾಸಕ ಕೆ.ಎಸ್.ಬಸವಂತಪ್ಪ ಸೋಮವಾರ ಅಧಿಕಾರಿಗಳ ಸಮೇತ ಸ್ಥಳಕ್ಕೆ ಭೇಟಿ ನೀಡಿದರು.ಅರಣ್ಯದಲ್ಲಿ 5 ಕಿಮೀ ಕಾಲ್ನಡಿಗೆ:
ಕಾಡಿನೊಳಗೆ ಸುಮಾರು 5 ಕಿಮೀ ಕಾಲ್ನಡಿಗೆಯಲ್ಲಿ ಶಾಸಕರು, ಅಧಿಕಾರಿಗಳು, ರೈತ ಮುಖಂಡರು, ಗ್ರಾಮಸ್ಥರು ಸಾಗಿ, ಬುಳ್ಳಾಪುರದಲ್ಲಿ ಪಾಳೇಗಾರರ ಕಾಲದ ಕೆರೆಯ ಸ್ಥಳವನ್ನು ತಲುಪಿದರು. ಅಲ್ಲೊಂದು ಮಿನಿ ಜಲಾಶಯ ನಿರ್ಮಿಸಿದರೆ ಸುತ್ತಮುತ್ತಲಿನ ಅಂತರ್ಜಲ ಹೆಚ್ಚಳವಾಗುವ ಜೊತೆಗೆ ರೈತರು, ಜನ- ಜಾನುವಾರಗಳು, ಕಾಡು ಪ್ರಾಣಿಗಳಿಗೂ ನೀರುಣಿಸಿದಂತಾಗುತ್ತದೆ. ಇಂಥದ್ದೊಂದು ಮಾನವೀಯ ಸಂಕಲ್ಪದೊಂದಿಗೆ ಬುಳ್ಳಾಪುರ ಕೆರೆಗೆ ಕಾಯಕಲ್ಪ ನೀಡಲು ಶಾಸಕ ಬಸವಂತಪ್ಪ ಮುಂದಾಗಿದ್ದಾರೆ.ಬುಳ್ಳಾಪುರ ಕೆರೆ ಜೀರ್ಣೋದ್ಧಾರ ಮಾಡಿ, ಅಲ್ಲೊಂದು ಮಿನಿ ಜಲಾಶಯ ನಿರ್ಮಿಸುವಂತೆ ಅನೇಕ ಸಲ ಸರ್ಕಾರದ ಗಮನ ಸೆಳೆದಿದ್ದ ಶಾಸಕ ಬಸವಂತಪ್ಪ ವಿಧಾನಸಭೆ ಅಧಿವೇಶನದಲ್ಲೂ ಈ ವಿಚಾರ ಪ್ರಸ್ತಾಪಿಸಿ, ಸಂಬಂಧಿಸಿದ ಸಚಿವರ ಗಮನ ಸೆಳೆದಿದ್ದರು. ಅರಣ್ಯ ಇಲಾಖೆ ಕಚೇರಿಯಲ್ಲಿ ಕಳೆದ ವಾರ ನ.11ರಂದು ಜಿಲ್ಲಾಧಿಕಾರಿ, ಜಿಪಂ ಸಿಇಒ ಸಮ್ಮುಖ ಮಿನಿ ಜಲಾಶಯ ನಿರ್ಮಿಸಲು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಸ್ಥಳ ಪರಿಶೀಲಿಸಲು ನಿರ್ಧರಿಸಿದ್ದರು. ಅದರಂತೆ ಸೋಮವಾರ ಅಧಿಕಾರಿಗಳ ದಂಡಿನ ಸಮೇತ ಮತ್ತೆ ಪಾಳೇಗಾರರ ಕಾಲದ ಬುಳ್ಳಾಪುರ ಕೆರೆಯ ಸ್ಥಳಕ್ಕೆ ಭೇಟಿ ನೀಡಿದ್ದರು.
ಅರಣ್ಯ ಇಲಾಖೆ ಡಿಎಫ್‌ಒ ಹರ್ಷವರ್ಧನ್, ಆರ್‌ಎಫ್‌ಒ ಷಣ್ಮುಖಪ್ಪ, ಸಣ್ಣ ನೀರಾವರಿ ಇಲಾಖೆ ಎಇಇ ಪ್ರವೀಣ ಸಹ ಶಾಸಕರು, ಹಿರಿಯ ಅಧಿಕಾರಿಗಳೊದಿಗೆ ಹಾಜರಿದ್ದು, ಉದ್ದೇಶಿತ ಯೋಜನೆ ಬಗ್ಗೆ ವಿವರಿಸಿದರು.ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಹನುಮಂತಪ್ಪ ಮಾಯಕೊಂಡ, ಜಿಪಂ ಮಾಜಿ ಸದಸ್ಯ ಮಾಯಕೊಂಡ ಎಸ್.ವೆಂಕಟೇಶ, ಗ್ರಾಪಂ ಅಧ್ಯಕ್ಷೆ ಬಿ.ಸಿ.ಸಾಕಮ್ಮ, ಮುಖಂಡರಾದ ರುದ್ರೇಶ, ಗೋಪಾಲ, ಪರಶುರಾಮಪ್ಪ, ಬೀರಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
- - -(ಬಾಕ್ಸ್) * 40 ಅಡಿಗೂ ಅಧಿಕ ಆಳ: ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಕಾಡು, ಗುಡ್ಡಗಳ ಮಧ್ಯೆ ನೂರಾರು ಎಕರೆ ಪ್ರದೇಶದಲ್ಲಿ ಸುಮಾರು 40 ಅಡಿಗೂ ಅಧಿಕ ಆಳವಿರುವ ವಿಶಾಲ ಜಾಗವಿದ್ದು, ಅಲ್ಲಿ ಮಿನಿ ಜಲಾಶಯ ನಿರ್ಮಿಸಿದರೆ ಅಧಿಕ ನೀರು ಸಂಗ್ರಹ ಸಾಧ್ಯವಾಗುತ್ತದೆ. ಇದರಿಂದ ಸುತ್ತಮುತ್ತಲಿನ 50 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಬಹುದು. ಕಾಡು ಪ್ರಾಣಿಗಳಿಗೂ ನೀರೊದಗಿಸಬಹುದು. ಅಂತರ್ಜಲ ವೃದ್ಧಿಯಾಗಿ ಮಳೆಯಾಶ್ರಿತ ಈ ಭಾಗದ ಜನರ ಕೃಷಿ ಚಟುವಟಿಕೆಗೂ ಅನುಕೂಲವಾಗುತ್ತದೆ. ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಮಿನಿ ಜಲಾಶಯ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
- - -(ಕೋಟ್) ಮಾಯಕೊಂಡ ಹೊರವಲಯದ ಕಾಡಿನ ಮಧ್ಯೆ, ಗುಡ್ಡಗಳ ಅಂಚಿನಲ್ಲಿರುವ ಚಿತ್ರದುರ್ಗ ಪಾಳೇಗಾರರ ಕಾಲದ ಬುಳ್ಳಾಪುರ ಕೆರೆ ನಾಪತ್ತೆಯಾಗಿತ್ತು. ಇತ್ತೀಚಿಗೆ ಈ ಕೆರೆಯು ಳಕಿಗೆ ಬಂದಿದ್ದು, ಕೆರೆ ಅಭಿವೃದ್ಧಿಪಡಿಸುವ ಉದ್ದೇಶದಿಂದ 3-4 ಬಾರಿ ಖುದ್ದಾಗಿ ಸ್ಥಳ ವೀಕ್ಷಣೆ ಮಾಡಿ ಬಂದಿದ್ದೇನೆ. ಐತಿಹಾಸಿಕ ಹಿನ್ನೆಲೆ ಎರಡ್ಮೂರು ಶತಮಾನಗಳಷ್ಟು ಹಿನ್ನೆಲೆ ಹೊಂದಿರುವ ಬುಳ್ಳಾಪುರ ಕೆರೆಗೆ ಕಾಯಕಲ್ಪ ನೀಡಿ, ಕೆರೆ ಜೀರ್ಣೋದ್ಧಾರ ಮಾಡಲು ನಿರ್ಧರಿಸಿದ್ದೇನೆ.
- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ.- - -
-17ಕೆಡಿವಿಜಿ1, 2.ಜೆಪಿಜಿ:ದಾವಣಗೆರೆ ತಾಲೂಕಿನ ಮಾಯಕೊಂಡದ ಕಾಡು, ಗುಡ್ಡಗಳ ಮಧ್ಯೆ ಚಿತ್ರದುರ್ಗ ಪಾಳೇಗಾರರ ಕಾಲದ ಐತಿಹಾಸಿಕ ಕೆರೆ ಪತ್ತೆಯಾದ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ, ಡಿಸಿ, ಜಿಪಂ ಸಿಇಒ, ಅರಣ್ಯಾಧಿಕಾರಿಗಳು, ಸ್ಥಳೀಯ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.