ಡಂಬಳ: ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ನೀಡಬೇಕಿದ್ದ ಉಚಿತವಾಗಿ ಶೇಂಗಾ ಬಿತ್ತನೆ ಬೀಜವನ್ನು ಅರ್ಹ ರೈತರಿಗೆ ವಿತರಿಸದೇ ತಮಗೆ ಬೇಕಾದವರಿಗೆ ನೀಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು, ತನಿಖೆ ನಡೆಸಬೇಕೆಂದು ಆಗ್ರಹಿಸಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್.ಬಿ. ರಾಮೇನಳ್ಳಿ ಅವರಿಗೆ ರೈತರು ಮನವಿ ಸಲ್ಲಿಸಿದರು.
ಯುವ ರೈತ ಆದಿತ್ಯ ಗದಗಿನ ಮಾತನಾಡಿ, ಶೇಂಗಾ ಬಿತ್ತನೆ ಬೀಜ ವಿತರಿಸುವ ಕುರಿತು ಡಂಬಳ ಹೋಬಳಿಯ ಯಾವುದೇ ರೈತರಿಗೆ ತಿಳಿಸಿಲ್ಲ. ಅಲ್ಲದೇ ಬಿತ್ತನೆ ಬೀಜವನ್ನು ನಿಜವಾದ ಫಲಾನುಭವಿಗಳಿಗೆ ನೀಡಿಲ್ಲ. ಸರ್ಕಾರದಿಂದ ಆದೇಶ ಇಲ್ಲದಿದ್ದರೂ ಬಿಲ್ಲನ್ನು ನೀಡದೆ ₹1000 ಹಣವನ್ನು ರೈತರಿಂದ ಪಡೆಯಲಾಗಿದೆ. ಕಡಿಮೆ ಹಿಡುವಳಿಯ ಕಡುಬಡವ ಎಸ್‌ಸಿ, ಎಸ್ಟಿ, ಅಲ್ಪಸಂಖ್ಯಾತ ರೈತರಿಗೆ ಆದ್ಯತೆ ನೀಡದೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರಾತೋರಾತ್ರಿ ಉಚಿತ ಬೀಜ ನೀಡಲಾಗಿದೆ. ಬಹುತೇಕ ಬಿತ್ತನೆ ಬೀಜ ಶ್ರೀಮಂತರ ಪಾಲಾಗಿದೆ. ಈ ಕುರಿತು ಸೂಕ್ತ ತನಿಖೆ ಮಾಡಬೇಕು. ರೈತರಿಗೆ ₹1000 ಹಣವನ್ನು ಮರಳಿ ಕೊಡಬೇಕು ಎಂದು ಮನವಿ ಮಾಡಿದರು.
ಮನವಿ ಸಲ್ಲಿಸುವ ವೇಳೆ ರೈತರಾದ ಪ್ರಕಾಶ ಮೇಗೂರ, ಪುಂಡಲೀಕ ಪಾರಪ್ಪನವರ, ಆದಿತ್ಯ ಗದಗಿನ, ಮಲ್ಲಪ್ಪ ಹರಿಜನ, ವಿ.ಆರ್. ಗದಗಿನ, ಬಿ.ಎಸ್. ಮೇಗೇರಿ, ಬಿ.ವೈ. ಯಲಭೋವಿ, ಎಸ್.ಎಂ. ವಲ್ಲೇನ್ನವರ, ಸೋಯಲ್ ತಾಂಬೋಟಿ, ಬುಡ್ನೆಸಾಬ ಜಲಾಲನವರ, ಶ್ರೀಧರ ಪಲ್ಲೇದ, ಎ.ಎಂ. ತಾಂಬೋಟಿ, ಭರಮಪ್ಪ ಮಂಗೋಜಿ, ಶ್ರೀಕಾಂತ ಶಿರಿಗೇರಿ ಇತರರು ಇದ್ದರು.ಡಂಬಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ ಮಾತನಾಡಿ, ತಾಲೂಕು ಅಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಉಚಿತ ಶೇಂಗಾ ಬೀಜವನ್ನು ರೈತರಿಗೆ ನೀಡಲಾಗಿದೆ. ಆಧಾರ ಕಾರ್ಡ್ ಪಡೆದು ಅರ್ಹ ರೈತರಿಗೆ ಶೇಂಗಾ ಬೀಜ ವಿತರಿಸಲಾಗಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದರು.