ಹಾನಗಲ್ಲ: ಉತ್ತರದ ರಾಜ್ಯಗಳಿಗೆ ಬೆಣ್ಣೆ, ದಕ್ಷಿಣದ ರಾಜ್ಯಗಳಿಗೆ ಸುಣ್ಣ ಎನ್ನುವ ಅರ್ಥದಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ನಮ್ಮ ರಾಜ್ಯದಿಂದ ಪ್ರತಿವರ್ಷ ಕೇಂದ್ರ ಸರ್ಕಾರ ತೆರಿಗೆ ರೂಪದಲ್ಲಿ 4.5 ಲಕ್ಷ ಕೋಟಿ ರು. ಸಂಗ್ರಹಿಸುತ್ತಿದ್ದು, ಮರಳಿ ಕೇವಲ 65 ಸಾವಿರ ಕೋಟಿ ರು. ನೀಡುತ್ತಿದೆ. ನ್ಯಾಯಸಮ್ಮತ ಅನುದಾನ, ಪರಿಹಾರ ಮೊತ್ತವನ್ನು ನ್ಯಾಯಾಲಯದ ಮೆಟ್ಟಿಲೇರಿ ಪಡೆಯುವಂತ ಸಂದರ್ಭ ನಿರ್ಮಾಣವಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಗಡೆಗುಂಡಿ ಯಲ್ಲಾಪುರ ಗ್ರಾಮದಲ್ಲಿ ನಡೆದ ಬಮ್ಮನಹಳ್ಳಿ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಡೀ ದಕ್ಷಿಣ ಭಾರತದಲ್ಲಿ ಎಲ್ಲ ರಾಜ್ಯಗಳು ಸೇರಿ 150 ಜನ ಲೋಕಸಭಾ ಸದಸ್ಯರಿದ್ದು, ಉತ್ತರ ಪ್ರದೇಶವೊಂದರಲ್ಲಿಯೇ 80 ಜನ ಲೋಕಸಭೆ ಸದಸ್ಯರಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಉತ್ತರದ ಅನೇಕ ರಾಜ್ಯಗಳು ಕರ್ನಾಟಕಕ್ಕಿಂತಲೂ ಕಡಿಮೆ ತೆರಿಗೆ ಪಾವತಿಸುತ್ತಿದ್ದರೂ ಯಥೇಚ್ಛವಾಗಿ ಅನುದಾನ ಪಡೆಯುತ್ತಿವೆ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಈ ರೀತಿ ತಾರತಮ್ಯ ಮಾಡದೇ ಎಲ್ಲ ರಾಜ್ಯಗಳಿಗೂ ಸಹ ನ್ಯಾಯಸಮ್ಮತವಾಗಿ ಅನುದಾನ ನೀಡಲಾಗುತ್ತಿತ್ತು. ಇದೀಗ ಮನರೇಗಾ ಯೋಜನೆ ಹೆಸರು, ಸ್ವರೂಪ ಬದಲಿಸಿ ಕೇಂದ್ರ ಸರ್ಕಾರ ಗ್ರಾಮಭಾರತದ ಮೇಲೆ ಗದಾಪ್ರಹಾರ ನಡೆಸಿದೆ. ಪ್ರತಿ ಗ್ರಾಪಂಗಳು ಈ ಯೋಜನೆಯಡಿ ಪ್ರತಿವರ್ಷ ಕನಿಷ್ಠ ಒಂದು ಕೋಟಿ ರೂ.ವರೆಗೆ ಅನುದಾನ ಪಡೆಯುತ್ತಿದ್ದವು. ಯೋಜನೆಗೆ ಶೇ. 90 ರಷ್ಟು ಅನುದಾನ ಒದಗಿಸುತ್ತಿದ್ದ ಕೇಂದ್ರ ಸರ್ಕಾರ ಅದನ್ನೀಗ ಶೇ. 60 ಕ್ಕಿಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಉದ್ಯೋಗ ಮತ್ತು ನ್ಯಾಯಸಮ್ಮತ ವೇತನದ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಈ ಅನ್ಯಾಯ ಪ್ರಶ್ನಿಸುವ ಬದಲಿಗೆ ಬಿಜೆಪಿ ಸಂಸದರು, ಮುಖಂಡರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ ಮಾತನಾಡಿ, ಶ್ರೀನಿವಾಸ ಮಾನೆ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ನೆನೆಗುದಿಗೆ ಬಿದ್ದಿದ್ದ ಸಾರ್ವಜನಿಕ ಕೆಲಸ, ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುತ್ತಿದ್ದಾರೆ. ಪ್ರತಿವರ್ಷ 250-300 ಕೋಟಿ ರು.ಗಿಂತ ಹೆಚ್ಚು ಅನುದಾನ ತಾಲೂಕಿಗೆ ಸಿಗುತ್ತಿದೆ. 250 ಕೋಟಿ ರು. ಆರ್ಥಿಕ ನೆರವು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ತಾಲೂಕಿನ ಜನರಿಗೆ ಲಭಿಸುತ್ತಿದೆ ಎಂದು ಹೇಳಿದ ಅವರು ಬ್ಲಾಕ್ ಮತ್ತು ಜಿಪಂ ವ್ಯಾಪ್ತಿಗಳಲ್ಲಿ ಸಭೆ ನಡೆಸುವ ಮೂಲಕ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಲಾಗುತ್ತಿದೆ. ಪಕ್ಷದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದರು. ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ಹಾನಗಲ್ ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಕೆಡಿಪಿ ಸದಸ್ಯ ಹನೀಫ್ ಬಂಕಾಪೂರ, ಮುಖಂಡರಾದ ಚನ್ನಬಸಣ್ಣ ಬಿದರಗಡ್ಡಿ, ಎಂ.ಎಸ್. ಪಾಟೀಲ, ರಾಮಚಂದ್ರ ರಾಮಜಿ, ಬಸವಣ್ಣೆಪ್ಪ ಓಲೇಕಾರ, ವಸಂತ ಕಿರವಾಡಿ, ಶಿವಣ್ಣ ಗೊಲ್ಲರ, ಪುಟ್ಟಪ್ಪ ಆರೆಗೊಪ್ಪ, ಸುರೇಶ ಪಾಳಾ, ಮಕ್ತೇಶ್ವರ ಹಸನಾಬಾದಿ, ಅಶೋಕ ಜಾಧವ, ರಾಮಣ್ಣ ಓಲೇಕಾರ, ಅಶೋಕ ಓಣಿಕೇರಿ, ಉಮೇಶ ದೊಡ್ಡಮನಿ, ಶಿವನಾಗಪ್ಪ ಎಲಿಗಾರ, ಪ್ರವೀಣ ಹಿರೇಮಠ, ಬಸವರಾಜ ಕೋಲಕಾರ, ಉಮೇಶ ದಾನಪ್ಪನವರ, ಮಕ್ಬೂಲ್ ಬಡಗಿ, ಶಿವು ಭದ್ರಾವತಿ, ಭರತ್ ಜಾಧವ, ಫಕ್ಕೀರಪ್ಪ ಹರಿಜನ, ಶಬ್ಬೀರ್ ಬಮ್ಮನಹಳ್ಳಿ ಸೇರಿದಂತೆ ಇನ್ನಿತರರು ಇದ್ದರು.ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತದಲ್ಲಿ ಇದ್ದಾಗ ಗ್ರಾಮೀಣರಿಗೆ ಉದ್ಯೋಗದ ಖಾತರಿ ನೀಡಲಾಗಿತ್ತು. ಈಗಿನ ಬಿಜೆಪಿ ನೇತೃತ್ವದ ಸರ್ಕಾರ ಉದ್ಯೋಗಕ್ಕೆ ಕತ್ತರಿ ಹಾಕಿದೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಹಿಂದಿನ ಸರ್ಕಾರಗಳು ರೂಪಿಸಿದ್ದ ಬಹುಪಾಲು ಯೋಜನೆಗಳನ್ನು ಬುಡಮೇಲು ಮಾಡಿ, ಹಾಳು ಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.