ವಿಐಎಸ್ಸೆಲ್‌ಗೆ ಬಂಡವಾಳ ಹೂಡಿಕೆ ಬಗ್ಗೆ ಚರ್ಚೆ: ಎಚ್‌.ಡಿ.ಕುಮಾರಸ್ವಾಮಿ

KannadaprabhaNewsNetwork | Published : Jun 19, 2024 1:07 AM

ಸಾರಾಂಶ

ಬೆಂಗಳೂರಿನ ಕೆಐಓಸಿಎಲ್ ಕಚೇರಿಯಲ್ಲಿ ಮಂಗಳವಾರ ಜಾತ್ಯತೀತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಅವರ ನೇತೃತ್ವದ ವಿಐಎಸ್‌ಎಲ್ ಕಾರ್ಮಿಕ ನಿಯೋಗದೊಂದಿಗೆ ಮಂಗಳವಾರ ಕೇಂದ್ರ ಉಕ್ಕು ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವ ಸಂಬಂಧ ಮುಂದಿನ ೧೫ ದಿನಗಳಲ್ಲಿ ಮತ್ತೊಮ್ಮೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಕೇಂದ್ರ ಉಕ್ಕು ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾರ್ಮಿಕರ ನಿಯೋಗಕ್ಕೆ ಭರವಸೆ ನೀಡಿದ್ದಾರೆ. .

ಬೆಂಗಳೂರಿನ ಕೆಐಓಸಿಎಲ್ ಕಚೇರಿಯಲ್ಲಿ ಮಂಗಳವಾರ ಜಾತ್ಯತೀತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಅವರ ನೇತೃತ್ವದ ಕಾರ್ಮಿಕ ನಿಯೋಗದೊಂದಿಗೆ ಸಭೆ ನಡೆಸಿದ ಉಕ್ಕು ಸಚಿವರು, ಕಾರ್ಖಾನೆಯ ಸ್ಥಿತಿಗತಿಗಳ ಕುರಿತು ನಿಯೋಗದಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ಭಾರತೀಯ ಉಕ್ಕು ಪ್ರಾಧಿಕಾರ ಈ ಹಿಂದೆ ನಷ್ಟದಲ್ಲಿದ್ದ ಉತ್ತರ ಭಾರತದ ತನ್ನ ಕಾರ್ಖಾನೆಗಳಿಗೆ ಲಕ್ಷಾಂತರ ಕೋಟಿ ರು. ಬಂಡವಾಳ ತೊಡಗಿಸಿದ್ದು, ಈಗಾಗಲೇ ಆ ಕಾರ್ಖಾನೆಗಳು ಆಧುನೀಕರಣಗೊಂಡು ಪ್ರಸ್ತುತ ಲಾಭದಲ್ಲಿ ಮುನ್ನಡೆಯುತ್ತಿವೆ. ಆದರೆ ನಮ್ಮ ರಾಜ್ಯದ ವಿಐಎಸ್‌ಎಲ್ ಕಾರ್ಖಾನೆಗೆ ಮಾತ್ರ ಯಾವುದೇ ಬಂಡವಾಳ ತೊಡಗಿಸದೆ ನಷ್ಟದ ಹಾದಿ ಹಿಡಿಯುವಂತೆ ಮಾಡಿ ಇದೀಗ ಕಾರ್ಖಾನೆ ಮುಚ್ಚಲು ಹೊರಟಿದೆ ಎಂದು ನಿಯೋಗ ಆರೋಪಿಸಿತು.

ಈಗ ಮತ್ತೊಮ್ಮೆ ಸುಮಾರು ೧ ಲಕ್ಷ ಕೋಟಿ ರು. ಬಂಡವಾಳ ತೊಡಗಿಸುವ ಮೂಲಕ ಉತ್ತರ ಭಾರತದ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಲು ಪ್ರಾಧಿಕಾರ ಸಿದ್ಧತೆ ಕೈಗೊಂಡಿದ್ದು, ಈ ಬಂಡವಾಳದಲ್ಲಿ ವಿಐಎಸ್‌ಎಲ್ ಕಾರ್ಖಾನೆಗೂ ಕೂಡ ಹೆಚ್ಚಿನ ಪಾಲು ಸಿಗಬೇಕು ಹಾಗೂ ತಕ್ಷಣ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವ ಪ್ರಕ್ರಿಯೆಯಿಂದ ಕೈಬಿಟ್ಟು ಅಭಿವೃದ್ಧಿಪಡಿಸಿ ಮುಂದಿನ ನೂರಾರು ವರ್ಷಗಳ ಕಾಲ ಮುನ್ನಡೆಸಿಕೊಂಡು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಮನವಿ ಮಾಡಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಉಕ್ಕು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ೧೫ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಿ ಬಂಡವಾಳ ತೊಡಗಿಸಲು ಇರುವ ಮಾರ್ಗೋಪಾಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.

ಕಾರ್ಖಾನೆಯ ಕಾರ್ಮಿಕರ ಸಂಘ, ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕಾರ್ಮಿಕ ಮುಖಂಡರು ಮತ್ತು ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು ನಿಯೋಗದಲ್ಲಿ ಪಾಲ್ಗೊಂಡಿದ್ದರು.

ಕಾರ್ಖಾನೆ ಅಭಿವೃದ್ಧಿಗೊಳಿಸುವ ಸಂಬಂಧ ನಿರಂತರವಾಗಿ ಪ್ರಯತ್ನಿಸುತ್ತಿರುವ ಸಂಸದ ಬಿ.ವೈ.ರಾಘವೇಂದ್ರ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಹಾಗೂ ಪಕ್ಷದ ಸ್ಥಳೀಯ ಮುಖಂಡರಿಗೆ ಕಾರ್ಮಿಕರ ನಿಯೋಗ ಕೃತಜ್ಞತೆ ಸಲ್ಲಿಸಿದೆ.

Share this article