ಗಣಿಜಿಲ್ಲೆ ಬಳ್ಳಾರಿಯಲ್ಲಿ ಶಂಕಿತ ಡೆಂಘೀಜ್ವರ ಹೆಚ್ಚಳ

KannadaprabhaNewsNetwork |  
Published : Jun 19, 2024, 01:06 AM IST
ಬಳ್ಳಾರಿಯ ಕಪ್ಪಗಲ್ ರಸ್ತೆಯ ವಿಶ್ವೇಶ್ವರಯ್ಯನಗರದಲ್ಲಿ ಖಾಲಿ ನಿವೇಶನದಲ್ಲಿ ಸಂಗ್ರಹಗೊಂಡಿರುವ ಮಳೆನೀರು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ.  | Kannada Prabha

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ ಡೇಂಘೀಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರದಲ್ಲಿಯೇ ಹೆಚ್ಚು ಪ್ರಕರಣಗಳು ಕಂಡುಬಂದಿವೆ.

ಮಂಜುನಾಥ ಕೆ.ಎಂ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮಳೆ ಶುರುವಾಗುತ್ತಿದ್ದಂತೆಯೇ ನಗರ ಸೇರಿದಂತೆ ಜಿಲ್ಲಾದ್ಯಂತ ಡೆಂಘೀ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು ಜ್ವರಬಾಧೆಯಿಂದ ಜನ ಕಂಗಾಲಾಗಿದ್ದಾರೆ.

ಕಳೆದ ಎರಡು ತಿಂಗಳ ಅವಧಿಯಲ್ಲಿಯೇ ನೂರಾರು ಜನರಿಗೆ ಶಂಕಿತ ಡೆಂಘೀ ಜ್ವರ ಕಾಣಿಸಿಕೊಂಡಿದೆ. ಪುಟ್ಟ ಮಕ್ಕಳಲ್ಲಿ ಕಂಡು ಬರುವ ಜ್ವರಬಾಧೆಯಿಂದ ಪೋಷಕರು ಆತಂಕಗೊಂಡಿದ್ದಾರೆ.

ಮೇ ತಿಂಗಳಲ್ಲಿ 439 ಶಂಕಿತ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 24 ಜನರಿಗೆ ಡೆಂಘೀ ಇರುವುದು ದೃಢಗೊಂಡಿದೆ. ಜೂನ್ ತಿಂಗಳ 17ರ ವರೆಗೆ 147 ಶಂಕಿತ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿವೆ. 6 ಜನರಿಗೆ ಡೆಂಘೀ ಇರುವುದು ಖಚಿತವಾಗಿದೆ. ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ತದನಂತರದಲ್ಲಿ ಸಿರುಗುಪ್ಪ, ಸಂಡೂರು, ಕಂಪ್ಲಿ ಹಾಗೂ ಕುರುಗೋಡು ತಾಲೂಕಿನಲ್ಲಿ ಹೆಚ್ಚಿನ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿವೆ. ಡೆಂಘೀಯಿಂದ ಯಾವುದೇ ಸಾವು ಪ್ರಕರಣಗಳು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿದ ಶಂಕಿತ ಡೆಂಘೀ ಜ್ವರದಿಂದಾಗಿ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಸಂಖ್ಯೆ ತೀವ್ರ ಏರಿಕೆಗೊಂಡಿದೆ. ಈ ಪೈಕಿ ಮಕ್ಕಳ ಸಂಖ್ಯೆಯೇ ಅಧಿಕವಾಗಿದ್ದು ಖಾಸಗಿ ಕ್ಲಿನಿಕ್‌ಗಳ ಮುಂದೆ ಪುಟ್ಟ ಮಕ್ಕಳೊಂದಿಗೆ ಪೋಷಕರು ವೈದ್ಯರನ್ನು ಕಾಯುವ ದೃಶ್ಯ ಸಾಮಾನ್ಯವಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೋಬಳಿ ಪ್ರದೇಶಗಳಲ್ಲೂ ಶಂಕಿತ ಡೆಂಘೀಜ್ವರ ಪ್ರಕರಣಗಳು ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.

ಪಾಲಿಕೆಯ ವಿರುದ್ಧ ಜನಾಕ್ರೋಶ

ನಗರದಲ್ಲಿ ಶಂಕಿತ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಳಗೊಳ್ಳುತ್ತಿದ್ದರೂ ಮಹಾನಗರ ಪಾಲಿಕೆ ಫಾಗಿಂಗ್ ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯರಸ್ತೆಗಳಲ್ಲಿ ಮಾತ್ರ ಫಾಗಿಂಗ್ ಮಾಡಿಕೊಂಡು ಹೋಗುತ್ತಾರೆ. ಹೆಚ್ಚಾಗಿ ಡೆಂಘೀ ಜ್ವರ ಕಂಡು ಬಂದಿರುವ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಸ್ಥಳೀಯವಾಗಿ ಫಾಗಿಂಗ್ ಸೇರಿದಂತೆ ಅಗತ್ಯ ಮುನ್ನಚ್ಚರಿಕೆಯ ಕ್ರಮಗಳಾಗುತ್ತಿಲ್ಲ. ಸ್ವಚ್ಛತೆಗೆ ಆದ್ಯತೆ ಕೊಡದ ಪಾಲಿಕೆ ಅಧಿಕಾರಿಗಳು, ಮಳೆ ನೀರಿನಲ್ಲಿ ಔಷಧಿ ಸಿಂಪಡಿಸುವ ಹಾಗೂ ಡೆಂಘೀ ಪ್ರಕರಣ ಕಂಡು ಬಂದಿರುವ ಪ್ರದೇಶಗಳಲ್ಲಿ ಫಾಗಿಂಗ್ ಮಾಡುವ ಕಾಳಜಿ ತೋರಿಸುತ್ತಿಲ್ಲ. ಖಾಲಿ ನಿವೇಶನಗಳಲ್ಲಿ ಮಳೆನೀರು ನಿಂತು ಸೊಳ್ಳೆ ಹಾವಳಿ ಹೆಚ್ಚಾಗುತ್ತಿದ್ದರೂ ಯಾರ ವಿರುದ್ಧವೂ ಈ ವರೆಗೆ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. ವಾರ್ಡ್‌ವಾರು ತಂಡಗಳನ್ನು ರಚಿಸಿ, ತಾತ್ಕಾಲಿಕವಾಗಿ ಹಾಗೂ ಶಾಶ್ವತವಾಗಿ ನೀರು ನಿಲ್ಲುವ ಜಾಗಗಳನ್ನು ಗುರುತಿಸಿ, ಫಾಗಿಂಗ್ ಮತ್ತು ಔಷಧಿ ಸಿಂಪಡಣೆಗೆ ಮುಂದಾಗಿಲ್ಲ. ಪಾಲಿಕೆಯ ನಿರ್ಲಕ್ಷ್ಯವೇ ಜನರು ಡೆಂಘೀಯಿಂದ ಬಳಲುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಸಾರ್ವಜನಿಕರ ಪಾತ್ರವೂ ಮುಖ್ಯ

ನಗರ ಸೇರಿದಂತೆ ಜಿಲ್ಲೆಯಲ್ಲಿ ಡೆಂಘೀ ಜ್ವರ ನಿಯಂತ್ರಣದಲ್ಲಿ ಆಡಳಿತ ವ್ಯವಸ್ಥೆ ಜೊತೆಗೆ ಸಾರ್ವಜನಿಕರ ಪಾತ್ರವೂ ಇದೆ. ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಳೆನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಮಸ್ಯೆಯಿಂದಾಗಿ ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿಕೊಳ್ಳಲಾಗುತ್ತಿದ್ದು, ಸರಿಯಾಗಿ ಮುಚ್ಚುಳ ಹಾಕಬೇಕು. ತೆಂಗಿನ ಚಿಪ್ಪು ಮತ್ತಿತರ ಕಡೆ ಮಳೆ ಅಥವಾ ಶುದ್ಧನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಆದರೆ, ಸಾರ್ವಜನಿಕರು ಅದೆಷ್ಟೇ ಜಾಗೃತಿ ಮೂಡಿಸಿದರೂ ಸಹಕರಿಸುತ್ತಿಲ್ಲ. ಪ್ರತಿವರ್ಷವೂ ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ನೀಡಿದರೂ ಫಲಕಾರಿಯಾಗದಿರುವ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ಮುನ್ನೆಚ್ಚರಿಕೆ ವಹಿಸಿದರೆ ಜ್ವರದಿಂದ ಪಾರು

ಡೆಂಘೀ ಜ್ವರದಿಂದ ಬಚಾವ್ ಆಗಲು ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೊಳ್ಳೆಗಳು ಉತ್ಪತ್ತಿಯಾದಂತೆ ಮನೆಯ ಮಾಲೀಕರು ಕ್ರಮ ವಹಿಸಬೇಕು. ಮೈತುಂಬಾ ಬಟ್ಟೆ ಧರಿಸಬೇಕು. ರಾತ್ರಿ ಮಲಗುವ ವೇಳೆ ಸೊಳ್ಳೆ ಪರದೆ ಕಟ್ಟಿಕೊಳ್ಳಬೇಕು. ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೆ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ ವೈದ್ಯಾಧಿಕಾರಿಗಳು.ಸಹಕಾರ

ಡೆಂಘೀಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿದೆ. ಸಾಂಕ್ರಾಮಿಕ ರೋಗಗಳ ತಡೆಗೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಡೆಂಘೀ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಅಗತ್ಯ ಮುನ್ನಚ್ಚರಿಕೆ ವಹಿಸಿದೆ.

ಡಾ. ವೈ.ರಮೇಶ್ ಬಾಬು, ಜಿಲ್ಲಾ ಆರೋಗ್ಯಾಧಿಕಾರಿಗಳು, ಬಳ್ಳಾರಿ.

ನಿರ್ಲಕ್ಷ್ಯ

ನಗರದಲ್ಲಿ ಶಂಕಿತ ಡೆಂಘೀ ಜ್ವರ ಹೆಚ್ಚಾಗಲು ಪಾಲಿಕೆಯ ನಿರ್ಲಕ್ಷ್ಯವೇ ಕಾರಣ. ಪಾಲಿಕೆ ಅಧಿಕಾರಿಗಳು ಸ್ವಚ್ಛತೆ ಕಡೆ ಗಮನ ನೀಡುತ್ತಿಲ್ಲ. ಖಾಲಿ ನಿವೇಶಗಳಲ್ಲಿ ನಿಲ್ಲುವ ನೀರಿನಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಪಾಲಿಕೆ ಅಸಡ್ಡೆಯಿಂದಾಗಿಯೇ ಜನರು ತತ್ತರಿಸುವಂತಾಗಿದೆ.

ಲಕೋಟಿ ಶಿವಣ್ಣ, ಮೆಹಬೂಬ್, ಜಾನಕಿರಾಮ್,

ಗುಗ್ಗರಹಟ್ಟಿ ಪ್ರದೇಶ ನಿವಾಸಿಗಳು, ಬಳ್ಳಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ