ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿ ಕುರಿತು ಚರ್ಚೆ

KannadaprabhaNewsNetwork | Published : Jul 15, 2024 1:59 AM

ಸಾರಾಂಶ

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪರಿಣಿತ ತಜ್ಞರ ನಿಯೋಗ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ವಿಷಯಗಳ ಕುರಿತು ಚರ್ಚಿಸಿ ಮನವರಿಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪರಿಣಿತ ತಜ್ಞರ ನಿಯೋಗ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ವಿಷಯಗಳ ಕುರಿತು ಚರ್ಚಿಸಿ ಮನವರಿಕೆ ಮಾಡಲಾಯಿತು.

ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿಯವರು ನೂತನ ಸಂಸದರಿಗೆ ಅಭಿನಂದನೆಯನ್ನು ಸಲ್ಲಿಸಿ ಕಲಬುರಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ಸರಕಾರ ಘೋಷಣೆ ಮಾಡಿರುವ ಯೋಜನೆಗಳ ಬಗ್ಗೆ ವಿವರಿಸಿದರು.

ಕಲಬುರಗಿಯ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ, ಜವಳಿ ಪಾರ್ಕ್‌ ಅನುಷ್ಠಾನ, ಕಲಬುರಗಿ ಎರಡನೇ ವರ್ತುಲ ರಸ್ತೆ, ಕಲ್ಯಾಣ ಪಥ ಹೆದ್ದಾರಿ ರಸ್ತೆಗಳು, ಏಮ್ಸ್ ಸ್ಥಾಪನೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ನೂತನ ಸಂಸದರಿಗೆ ಮನವರಿಕೆ ಮಾಡಿದರು.

ಪರಿಣಿತ ತಜ್ಞರಾದ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ ಒಂದು ದಿನದ ಬೃಹತ್ ಕಾರ್ಯಾಗಾರ ಸಮಿತಿ ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಕಾರ್ಯಾಗಾರದ ಉದ್ಘಾಟನೆ ಎ.ಐಸಿ.ಸಿ. ಅಧ್ಯಕ್ಷರಿಂದ ಮಾಡಿಸಿ ಇದರಲ್ಲಿ ಕಲ್ಯಾಣ ಕರ್ನಾಟಕದ ಸಚಿವರು, ಸಂಸದರು, ಶಾಸಕರು ಸೇರಿದಂತೆ ಸಂಘ ಸಂಸ್ಥೆಗಳ ಅಧ್ಯಕ್ಷರು, ವಿಶೇಷವಾಗಿ ಏಳು ಜಿಲ್ಲೆಯ ಪರಿಣಿತ ವ್ಯಕ್ತಿಗಳನ್ನು ಆಹ್ವಾನಿಸಿ 371ನೇ(ಜೆ) ಕಲಂ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದರ ಜೊತೆಗೆ ಇದರ ಪರಿಣಾಮಕಾರಿ ಅನುಷ್ಠಾನದ ಕ್ರಮಗಳು ಹಾಗೂ ಕಲ್ಯಾಣ ಕರ್ನಾಟಕದ ರಚನಾತ್ಮಕ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸುವ ಫಲಪ್ರದ ಐತಿಹಾಸಿಕ ವೇದಿಕೆಯಾಗಬೇಕು. ಇದಕ್ಕೆ ನೂತನ ಸಂಸದರು ಸ್ಪಂದಿಸಬೇಕೆಂದು ತಿಳಿಸಿದರು.

ನೂತನ ಲೋಕಸಭಾ ಸದಸ್ಯರಾದ ದೊಡ್ಡಮನಿರವರು ಮಾತನಾಡಿ, ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ತಾವು ಅತಿ ಗಂಭೀರವಾಗಿ ಪರಿಗಣಿಸಿ ಸರಕಾರ ಮಟ್ಟದಲ್ಲಿ ಒತ್ತಾಯ ತರುವುದಲ್ಲದೆ ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಕಲ್ಯಾಣ ಕರ್ನಾಟಕದ ಐದು ಲೋಕಸಭಾ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಸಂಘಟಿತ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸುವ ಬಗ್ಗೆ ತಿಳಿಸಿದರು.

ನಿಯೋಗದಲ್ಲಿ ಪ್ರೊ. ಬಸವರಾಜ ಕುಮನೂರ, ಪ್ರೊ. ಶಂಕ್ರೆಪ ಹತ್ತಿ, ಡಾ. ಬಸವರಾಜ ಕಳಸಾ, ಡಾ. ಮಾಜಿದ್ ದಾಗಿ, ವಿನಾಯಕ ಪತ್ರಗಾರ, ಜಾನ್ ವಿಲ್ಸನ್, ರೌಫ್ ಖಾದರಿ, ಅಸ್ಲಂ ಚೌಂಗೆ, ಶಿವಾನಂದ ಕಾಂದೆ, ಮಂಜೂರ ಡೆಕ್ಕನಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article