ಶಿಕ್ಷಕರ ಬೇಡಿಕೆ ಬಗ್ಗೆ ಸಿಎಂ ಬಳಿ ಚರ್ಚೆ: ಮಧು ಬಂಗಾರಪ್ಪ

KannadaprabhaNewsNetwork | Published : Jan 12, 2024 1:46 AM

ಸಾರಾಂಶ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6 ಮತ್ತು 8ನೇ ತರಗತಿಗೆ ಪದೋನ್ನತಿಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6 ಮತ್ತು 8ನೇ ತರಗತಿಗೆ ಪದೋನ್ನತಿ ನೀಡಲು ಸುಗ್ರೀವಾಜ್ಞೆ ಮಾಡುವಂತೆ ಕೋರಿದ್ದೀರಿ. ಇದು ಸಚಿವ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಬೇಕಾದ ವಿಚಾರ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಇರುವುದರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ವಲ್ಪ ಹಿಂದೆ ಮುಂದೆ ಆಗಬಹುದು ಎಂದು ಹೇಳಿದರು. ಆದರೆ, ನಿಲ್ಲಿಸುವುದಿಲ್ಲ ಮಾಡೇ ಮಾಡುತ್ತೇನೆ. ಸಂಘಕ್ಕೆ ಬೆಂಗಳೂರಿನಲ್ಲಿ ನಿವೇಶನ ಸೇರಿದಂತೆ ಇನ್ನೂ ಸಾಕಷ್ಟು ಬೇಡಿಕೆಗಳನ್ನು ಇಟ್ಟಿದ್ದೀರಿ. ಇಲಾಖೆಯ ಸಚಿವನಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಇಚ್ಛಾಶಕ್ತಿ ಹೊಂದಿದ್ದೇನೆ. ಇನ್ನೊಂದು ವಾರ ಸಮಯ ಕೊಡಿ. ನಿಮ್ಮ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಬರಲಿ. ಮುಖ್ಯಮಂತ್ರಿ ಅವರ ಬಳಿಗೆ ನಿಯೋಗ ಹೋಗಿ ಶಿಕ್ಷಕರ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸಿ ಸಾಧ್ಯವಾದಷ್ಟೂ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಶಿಕ್ಷಕರೂ ಸೇರಿ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದ್ದೇವೆ. ಇದನ್ನು ಮುಂದಿನ ದಿನಗಳಲ್ಲಿ ಸಿಎಂ ಪರಿಗಣಿಸುವ ವಿಶ್ವಾಸವಿದೆ. ಕಾಂಗ್ರೆಸ್‌ ಪಕ್ಷ ಹಾಗೂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿಗೆ ತಪ್ಪುವ ಮಾತೇ ಇಲ್ಲ. ಆದರೆ ಒಪಿಎಸ್‌ ಅನುಷ್ಠಾನಕ್ಕೆ ಕಾಲಾವಕಾಶ ತೆಗೆದುಕೊಳ್ಳಬಹುದು. ಇದಕ್ಕೆ ನೀವೂ ಸಹಕಾರ ನೀಡಬೇಕು ಎಂದು ಸಚಿವರು ಹೇಳಿದರು.

ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, 2002ರಲ್ಲೇ ಶಿಕ್ಷಣ ಸಂವಿಧಾನ ಬದ್ಧ ಗ್ಯಾರಂಟಿಯಾಗಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದರೆ ಶಿಕ್ಷಕರ ಬೇಡಿಕೆಗಳು ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ. ಹಾಗಾಗಿ ರಾಜ್ಯ ಸರ್ಕಾರ ಆರ್‌ಟಿಇ ಕಾಯ್ದೆಯ ಸಮರ್ಪಕ ಜಾರಿಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಮಕ್ಕಳು, ಶಿಕ್ಷಕರಿಂದ ಶೌಚ ಸ್ವಚ್ಛತೆ ತಲೆ ತಗ್ಗಿಸುವ ವಿಚಾರ

ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಸ ಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು ತಲೆ ತಗ್ಗಿಸುವ ವಿಚಾರ, ನಮ್ಮ ಇಲಾಖೆಗೂ ಅಗೌರವ. ಇದಕ್ಕೆ ಆದಷ್ಟು ಬೇಗ ಮುಕ್ತಿ ಹಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು. ಪುಸ್ತಕ ಪೆನ್ನು ಹಿಡಿಯಬೇಕಾದ ಶಿಕ್ಷಕರು ಮತ್ತು ಮಕ್ಕಳ ಕೈಯಲ್ಲಿ ಕಸಪೊರಕೆ ಕೊಡುವ ಪದ್ಧತಿಯನ್ನು ನಾನು ಒಪ್ಪುವುದಿಲ್ಲ ಅವರು ಎಂದರು.

ಇನ್ನು ಶಾಲಾ ಶೌಚಾಲಯ ಸ್ವಚ್ಛತೆಗೆ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಮಕ್ಕಳು ಸಮುದಾಯದ ಪಾಲ್ಗೊಳ್ಳುವಿಕೆ ಅಳವಡಿಸಿಕೊಳ್ಳಬೇಕು. ರಾಜಕಾರಣಿಗಳು ಕೂಡ ತಮ್ಮ ಕ್ಷೇತ್ರ, ಊರಿನ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆ ಮಾಡಿ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ, ಮಾಜಿ ಎಂಎಲ್‌ಸಿ ಪುಟ್ಟಣ್ಣ, ಸಮಾಜಸೇವಕ ರಾಮೋಜಿಗೌಡ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್‌, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಶಾಂತಾರಾಂ ಸೇರಿದಂತೆ ವಿವಿಧ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆದರೆ, ಇಂತಹ ವಿಚಾರಗಳು ಬಹಳಷ್ಟು ಸಲ ಗಮನಕ್ಕೆ ಬರುವುದಿಲ್ಲ. ಮೊದಲೇ ಗಮನಕ್ಕೆ ಬಂದಿದ್ದರೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗನಾಗಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವನಾಗಿ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಈಗ ಗಮನಕ್ಕೆ ಬಂದಿದೆ. ಈ ಕಾರ್ಯಗಳಿಗಾಗಿ ಶಾಲೆಗಳಿಗೆ ಒಂದೇ ಬಾರಿ 48 ಸಾವಿರ ಡಿ ಗ್ರೂಪ್‌ ನೌಕರರನ್ನು ನೇಮಕ ಮಾಡುವುದು ಸುಲಭವಲ್ಲ. ಆದರೂ, ಆದಷ್ಟು ಬೇಗ ಇದನ್ನು ನಿಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಒಂದು ಉತ್ತಮ ಪರ್ಯಾಯ ವ್ಯವಸ್ಥೆ ತರಲು ತೀರ್ಮಾನ ಮಾಡಲಾಗುವುದು ಎಂದರು.

Share this article