ಹುಬ್ಬಳ್ಳಿ:
ಅನುದಾನ ರಹಿತ ಶಿಕ್ಷಕರ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದ ವೇಳೆ ಮುಖ್ಯಮಂತ್ರಿ, ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತೇನೆ. ನಿಮ್ಮ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಇಲ್ಲಿನ ಬಿವಿಬಿ ಬಯೋಟೆಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದಿಂದ ಆಯೋಜಿಸಿದ್ದ ನಮ್ಮ ಕನ್ನಡ ಶಾಲೆ ಉಳಿಸಿ ಅಭಿಯಾನದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಅನುದಾನ ರಹಿತ ಶಿಕ್ಷಕರ ಕಷ್ಟಗಳು ಈ ಬಾರಿ ದೂರಾಗುವ ಕಾಲ ಕೂಡಿ ಬಂದಿದೆ. ಬೆಳಗಾವಿ ಅಧಿವೇಶನದಲ್ಲಿ ತೀರ್ಮಾನಿಸಲಿದ್ದು ನಿಮ್ಮ ಬೇಡಿಕೆಗಳೆಲ್ಲ ಈಡೇರಬಹುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ಶಿಕ್ಷಣ ಸಚಿವರೊಂದಿಗೆ ಸಭೆ ಮಾಡಿ ನಿಮ್ಮ ಹೋರಾಟ ಹಾಗೂ ಸಮಸ್ಯೆ ಪ್ರಸ್ತಾಪಿಸುವೆ. ನಿಮ್ಮ ಕ್ಷೇತ್ರದ ಶಾಸಕರಿಗೆ ಈ ಕುರಿತು ಧ್ವನಿ ಎತ್ತುವಂತೆ ಮನವಿ ಮಾಡಬೇಕು. ಅನುದಾನಕ್ಕೊಳಪಡಿಸುವುದು ಸರ್ಕಾರಕ್ಕೆ ದೊಡ್ಡ ಮೊತ್ತವಲ್ಲ. ಹಿಂದಿನ ಸರ್ಕಾರವೊಂದು ವಿಮಾನ, ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್‌ಗಾಗಿ ₹ 98 ಕೋಟಿ ಖರ್ಚು ಮಾಡಿತ್ತು. ಹೀಗಾಗಿ ಇದೊಂದು ದೊಡ್ಡ ಮೊತ್ತವಲ್ಲ ಎಂದರು.2002ರಲ್ಲಿ ನಡೆದಂತಹ ಮತ್ತೊಂದು ಹೋರಾಟ ಎಲ್ಲರೂ ಸೇರಿ ಮಾಡೋಣ. ಅಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕರೆ ಮಾಡಿ ಎಸ್ಮಾ ಕಾಯ್ದೆಯಡಿ ಶಿಕ್ಷಕರನ್ನು ಬಂಧಿಸುವ ಎಚ್ಚರಿಕೆ ನೀಡಿದ್ದರು. ಆದರೂ ನಾವು ನಮ್ಮ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಅಂತಹ ಹೋರಾಟ ಅಗತ್ಯವಾಗಿದ್ದು, ಎಲ್ಲ ತಾಲೂಕಿನಲ್ಲಿ ನಮ್ಮ ಸಂಘಟನೆಯಿದೆ. ನಮ್ಮ ಸಂಘಟನೆ ಸೇರಿದಂತೆ ಎಲ್ಲ ಸಂಘಟನೆಗಳು ನಿಮ್ಮ ಬೆಂಬಲಕ್ಕೆ ಬರಲಿವೆ. ಅಧಿವೇಶನದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರೆಲ್ಲರನ್ನೂ ಸೇರಿಸಿ ಚರ್ಚೆಗೆ ಸೂಚಿಸಿದ್ದೇನೆ. ಈ ಅಧಿವೇಶನದಲ್ಲಿ ಇದಕ್ಕೊಂದು ಪರಿಹಾರ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದರು.
ಸಂಘದ ಅಧ್ಯಕ್ಷ ಜಿ.ಸಿ. ಶಿವಪ್ಪ ಮಾತನಾಡಿ, ನ. 1ರಂದು ಇಡೀ ರಾಜ್ಯ 50ನೇ ರಾಜ್ಯೋತ್ಸವ ಸಂಭ್ರಮದಲ್ಲಿತ್ತು. ಆದರೆ, ನಮಗದು ಕರಾಳ ದಿನ. ಸರ್ಕಾರಗಳ ನಿರ್ಲಕ್ಷದಿಂದಾಗಿ ಕನ್ನಡ ಶಾಲೆ ಮುಚ್ಚುತ್ತಿರುವ ಸಮಯದಲ್ಲಿ ಕನ್ನಡದ ಹೆಸರಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಕನ್ನಡ ಶಾಲೆ ಉಳಿಸಲು ಹೋರಾಟ ನಡೆಸಬೇಕಿದೆ. ಕನ್ನಡ ಕಟ್ಟಿ ಬೆಳೆಸುವ ಕೆಲಸ ಮಾಡಿದ ನಮಗೆ ಅನ್ಯಾಯವಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಕರಾತ್ಮಕ ಭರವಸೆ ಇನ್ನೂ ಜೀವಂತ ಉಳಿದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಶಾಲೆಗಳಿದ್ದು, ಅನುದಾನ ಸಿಕ್ಕರೆ ಈ ಭಾಗಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಈ ಅನುದಾನ ಕೊಟ್ಟರೆ ಕನ್ನಡ ಶಾಲೆ ಉಳಿಯುತ್ತವೆ. ಸರ್ಕಾರ ಆಂಗ್ಲ ಮಾಧ್ಯಮದ ಶಾಲೆ ತೆರೆಯುತ್ತಿರುವಾಗ ಇವರಿಗೆಲ್ಲಿದೆ ಮಾತೃಭಾಷೆ ಪ್ರೇಮ ಎಂದು ಪ್ರಶ್ನಿಸಿದರು.
ಶಿಕ್ಷಕರ ಹಸಿವು:ಸಂಡೂರಿನ ವಿರಕ್ತಮಠದ ಶ್ರೀಚನ್ನವೀರ ಸ್ವಾಮೀಜಿ ಮಾತನಾಡಿ, ಮಕ್ಕಳ ಹೊಟ್ಟೆಯ ಬಗ್ಗೆ ಯೋಚಿಸುವ ಸರ್ಕಾರಕ್ಕೆ ಶಿಕ್ಷಕರ ಹಸಿವು ಕಾಣಿಸುತ್ತಿಲ್ಲವೆ. ಖಾಸಗಿ ತಾರತಮ್ಯ ಮಾಡದೆ ಅನುದಾನ ನೀಡಿ ಕನ್ನಡ ಶಾಲೆ ಉಳಿಸಬೇಕು. ಅನುದಾನ ನೀಡದಿದ್ದರೆ ಸೇವೆ ಹೋಗಿ ಉದ್ಯಮವಾಗಿ ಗಣಿ ಮಾಲೀಕರು, ರಾಜಕಾರಣಿಗಳ ಸ್ವತ್ತಾಗಲಿದೆ. ಕನ್ನಡ ಸಾಹಿತ್ಯ ಸಮ್ಮೇಳನದಿಂದ ಕನ್ನಡ ಉಳಿಯುವುದಿಲ್ಲ, ಬೆಳೆಯುವುದಿಲ್ಲ ಎಂದು ಹೇಳಿದರು.
ಪಕ್ಷಾತೀತವಾಗಿ ಶಿಕ್ಷಕರ ಪರವಾಗಿ ಚರ್ಚೆ: ಸಂಕನೂರವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಬೆಳಗಾವಿ ಅಧಿವೇಶನದಲ್ಲಿ ಪಕ್ಷಾತೀತವಾಗಿ ವಿಧಾನ ಪರಿಷತ್ತಿನ ಎಲ್ಲ ಸದಸ್ಯರನ್ನು ಒಗ್ಗೂಡಿಸಿ ಈ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ. ಚರ್ಚೆಗಾಗಿ ಸಭಾಪತಿಗೆ ನಿಮಯದ ಪ್ರಕಾರ ಪ್ರಸ್ತಾವನೆ ಕಳುಹಿಸಿ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ಕನ್ನಡ ಶಾಲೆಗಳ ಫಲಿತಾಂಶ, ಸಂಸ್ಥೆ ಹಾಗೂ ಶಿಕ್ಷಕರ ಸಮಸ್ಯೆ ಕಂಡಿದ್ದೇವೆ. ಅವುಗಳೆನ್ನೆಲ್ಲ ಸರ್ಕಾರದ ಗಮನಕ್ಕೆ ತರುತ್ತೇವೆ. ಇತ್ತೀಚಿನ ಸರ್ಕಾರಗಳು ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿವೆ. ನೇಮಕಾತಿ ಆಗಬೇಕು. ಆದರೆ, ಸರ್ಕಾರ ಮಾಡುತ್ತಿಲ್ಲ ಎಂದು ಹೇಳಿದರು.
ಬೆಳಗಾವಿ ನಗರಾಭಿವೃದ್ಧಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಎಸ್.ಎಸ್. ಮಠದ, ಅಧ್ಯಕ್ಷ ಜಿ.ಆರ್. ಭಟ್ಟ, ಎಂ.ಜಿ. ಕೋರಿಶೆಟ್ಟಿ, ಬೆಳಗಾಂವಕರ, ಕಾರ್ಯಾಧ್ಯಕ್ಷ ನಾಗರಾಜ , ಹೊರಗಿನಮಠ, ಸಲೀಂ ಕಿತ್ತೂರು ಸೇರಿದಂತೆ ಇನ್ನಿತರರಿದ್ದರು.