ಹಾವೇರಿ: ಕಬ್ಬು ಬೆಳೆಗಾರರಿಗೆ ಲಾಭದಾಯಕ ದರ ನಿಗದಿಪಡಿಸುವುದು, ಸಕ್ಕರೆ ಕಾರ್ಖಾನೆಗಳ ರಿಕವರಿ ಪ್ರಮಾಣದಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ರೈತರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಕ್ಕರೆ ಮತ್ತು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಜಿಲ್ಲೆಯ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಸಮಸ್ಯೆ ಪರಿಹರಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ರೈತರ ಬೇಡಿಕೆಗಳನ್ನು ಸಂಬಂಧಿಸಿದವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಕ್ಕರೆ ಕಾರ್ಖಾನೆಗಳು ನಿಗದಿಪಡಿಸುತ್ತಿರುವ ದರ ಹಾಗೂ ರಿಕವರಿ ಪ್ರಮಾಣದ ಕುರಿತು ರೈತರು ಸಭೆಗೆ ಮಾಹಿತಿ ನೀಡಿ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಸಾಲಿನಲ್ಲಿ ಕೆಲವು ಕಾರ್ಖಾನೆಗಳಲ್ಲಿ ರಿಕವರಿ ಪ್ರಮಾಣ ಕಡಿಮೆಯಾಗಿದ್ದರಿಂದ ರೈತರಿಗೆ ನಿರೀಕ್ಷಿತ ದರ ದೊರೆಯಲಿಲ್ಲ. ಪ್ರಸಕ್ತ ಸಾಲಿನಲ್ಲಿ ರಿಕವರಿ ಪ್ರಮಾಣ ಹೆಚ್ಚಾಗಿದ್ದರೂ, ಅದಕ್ಕೆ ಅನುಗುಣವಾಗಿ ಕಬ್ಬಿಗೆ ದರ ನಿಗದಿಯಾಗಿಲ್ಲ ಎಂದು ರೈತರು ಅಸಮಾಧಾನ ಹೊರಹಾಕಿದರು.ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಪ್ರಮಾಣ ಮತ್ತು ಅದರಿಂದ ಉತ್ಪಾದನೆಯಾಗುವ ಸಕ್ಕರೆಯ ಪ್ರಮಾಣದ ಆಧಾರದ ಮೇಲೆ ರಿಕವರಿ ನಿಗದಿಯಾಗುತ್ತದೆ. ಆದರೆ, ರಿಕವರಿ ಪರೀಕ್ಷೆಯ ಪ್ರಕ್ರಿಯೆಯಲ್ಲಿ ರೈತರಿಗೆ ಮಾಹಿತಿ ಹಾಗೂ ಪರಿಶೀಲನೆಗೆ ಅವಕಾಶ ಕಲ್ಪಿಸುವ ಮೂಲಕ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು ಎಂದು ರೈತರು ಒತ್ತಾಯಿಸಿದರು. ಹಾಗೆಯೇ ಸರ್ಕಾರದ ವತಿಯಿಂದ ರಿಕವರಿ ಪರೀಕ್ಷೆ ನಡೆಸಲು ಪ್ರಯೋಗಾಲಯ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನೂ ಸಭೆಯ ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯೆಸಿದ ಸಚಿವರು, ಕಳೆದ ಸಾಲಿನ ಕಬ್ಬಿನ ಪಾವತಿ, ಕಾರ್ಖಾನೆಗಳಿಂದ ನೀಡಬೇಕಿರುವ ಮೊತ್ತ ಹಾಗೂ ಹೆಚ್ಚುವರಿ ಪಾವತಿಗೆ ಸಂಬಂಧಿಸಿದ ವಿಷಯಗಳನ್ನು ಪುನಃ ಪರಿಶೀಲಿಸಲಾಗುವುದು. ರೈತರ ಪರವಾಗಿ ಮಂಡಿಸಬೇಕಾದ ಎಲ್ಲ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸಭೆಯಲ್ಲಿ 2024- 25 ಹಾಗೂ 2025- 26ನೇ ಸಾಲಿನ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಕಬ್ಬು ನುರಿಸುವ ಪ್ರಮಾಣ, ರಿಕವರಿ ಹಾಗೂ ದರಗಳ ವಿವರಗಳನ್ನು ಒಳಗೊಂಡ ದಾಖಲೆಗಳನ್ನು ಪರಿಶೀಲಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಆಹಾರ ಇಲಾಖೆಯ ಉಪನಿರ್ದೇಶಕ ಡಿ.ಜೆ. ಮಂಜುನಾಥ, ರೈತ ಮುಖಂಡರು, ಕಬ್ಬು ಬೆಳೆಗಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.