ಸರ್ಕಾರಿ, ಅನುದಾನಿತ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಹಂತಗಳಲ್ಲಿ ಯಾವುದೇ ಪ್ರಶಸ್ತಿಯ ನಿರೀಕ್ಷೆಯಿಲ್ಲದೆ, ಎಲೆಮರೆ ಕಾಯಿಯಂತೆ ನಿಷ್ಠೆಯಿಂದ ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಸ್ವಾಗತಾರ್ಹ.

ಹಾವೇರಿ: ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಅನೇಕ ಮಂದಿ ಇದ್ದಾರೆ. ಜಿಲ್ಲಾ ಮಟ್ಟದಲ್ಲಿ ಹಗಲಿರುಳು ಶ್ರಮಿಸುವ ಎಲ್ಲರಿಗೂ ಪ್ರಶಸ್ತಿ ದೊರೆಯದಿರಬಹುದು. ಆದರೂ, ಅರ್ಹರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಅತ್ಯಂತ ಸಾರ್ಥಕವಾಗಿದ್ದು, ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಸಕ್ಕರೆ, ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳ ಸಂಘ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಜೆಸಿಐ ಹಾಗೂ ಜೆಎಸಿ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಜ್ಞಾನದೀಪ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಿ, ಅನುದಾನಿತ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಹಂತಗಳಲ್ಲಿ ಯಾವುದೇ ಪ್ರಶಸ್ತಿಯ ನಿರೀಕ್ಷೆಯಿಲ್ಲದೆ, ಎಲೆಮರೆ ಕಾಯಿಯಂತೆ ನಿಷ್ಠೆಯಿಂದ ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಸ್ವಾಗತಾರ್ಹ. ಕಳೆದ ಮೂರು ವರ್ಷಗಳಿಂದ ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ತಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗಕ್ಕೆ ಆಯ್ಕೆಯಾಗಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ. ಇದು ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ನಿರಂತರ ಪರಿಶ್ರಮಕ್ಕೆ ದೊರೆತ ಫಲ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಕೋನವನ್ನು ವಿಸ್ತರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಬಹುತೇಕ ಪಾಲಕರು ಹಾಗೂ ವಿದ್ಯಾರ್ಥಿಗಳು ವೈದ್ಯ, ಎಂಜಿನಿಯರ್ ವೃತ್ತಿಗಳತ್ತ ಮಾತ್ರ ಒತ್ತು ನೀಡುತ್ತಿದ್ದಾರೆ. ಇದರಾಚೆಗೂ ಹಲವು ಅವಕಾಶಗಳಿವೆ ಎಂಬುದನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದರು.

ಐಎಎಸ್, ಐಪಿಎಸ್ ಸೇರಿದಂತೆ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗಳ ಮೂಲಕ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುವ ಅವಕಾಶಗಳಿದ್ದು, ಈ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಪ್ರತಿಭಾವಂತ ಶಿಕ್ಷಕರು ಮತ್ತಷ್ಟು ಪ್ರತಿಭಾವಂತರನ್ನು ಸಮಾಜಕ್ಕೆ ನೀಡುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಒಟ್ಟು 16 ಶಿಕ್ಷಕರನ್ನು ಸನ್ಮಾನಿಸಿ, ಜ್ಞಾನದೀಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ವಿದ್ವಾಂಸ ಡಾ. ಶಂಭು ಬಳಿಗಾರ, ಡಿಡಿಪಿಐ ಮೋಹನ ದಂಡಿನ, ಬಿಇಒ ಶ್ರೀನಿವಾಸ, ಕಲಾವಿದ ಕರಿಯಪ್ಪ ಹಂಚಿನಮನಿ, ಜಿಲ್ಲಾ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಬಿ.ಎಂ. ಬೇವಿನಮರದ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ಜೆಸಿಐ ಅಧ್ಯಕ್ಷ ಟಿ.ಎಚ್. ಬಳಿಗಾರ, ಜೆಸಿಎ ಅಧ್ಯಕ್ಷ ಮುರುಗೇಶ ಹುಂಬಿ ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರ್ವಹಿಸಿದರು.